ಬೆಂಗಳೂರು: ಚಿಕ್ಕಪ್ಪ ಸೇರಿ ಮೂವರಿಂದ ಅತ್ಯಾಚಾರಕ್ಕೆ ಒಳಗಾದ 15 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಕೆಲವೇ ಗಂಟೆಗಳಲ್ಲಿ ಮಗು ತೀರಿಕೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ.
15 ವರ್ಷದ ಬಾಲಕಿ ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡಿದ್ದು, ಮದ್ಯವ್ಯಸನಿಯಾಗಿದ್ದ ತಂದೆ, ಮಗಳ ಬಗ್ಗೆ ನಿರ್ಲಕ್ಷ ವಹಿಸಿದ್ದ. ಸುಬ್ರಹ್ಮಣ್ಯಪುರ ಕೊಳಗೇರಿಯಲ್ಲಿ ತಂದೆಯೊಂದಿಗೆ ವಾಸವಾಗಿದ್ದ ಬಾಲಕಿ 7ನೇ ತರಗತಿ ಓದಿದ ನಂತರ ಶಾಲೆ ಬಿಟ್ಟಿದ್ದಳು. ಆಕೆಯ ಚಿಕ್ಕಪ್ಪ ಹಾಗೂ ಇನ್ನಿಬ್ಬರು ಆಮಿಷವೊಡ್ಡಿ ಆಕೆಯನ್ನು ಕಾಮತೃಷೆಗೆ ಬಳಸಿಕೊಂಡಿದ್ದರು ಎನ್ನಲಾಗಿದೆ.
ಮದ್ಯಪಾನ ಮಾಡಿ ಮನೆಗೆ ಬರುತ್ತಿದ್ದ ಚಿಕ್ಕಪ್ಪ ಅತ್ಯಾಚಾರ ಎಸಗಿದ್ದು ಈ ವಿಷಯ ತಂದೆಗೆ ತಿಳಿಸಿದರೂ ನಿರ್ಲಕ್ಷಿಸಿದ್ದಾರೆ. ಗರ್ಭಿಣಿಯಾಗಿದ್ದ ಆಕೆ ಮಾರ್ಚ್ 25 ರಂದು ಕುಮಾರಸ್ವಾಮಿ ಲೇಔಟ್ ಪಾರ್ಕ್ ಸಮೀಪ ಹೋಗುತ್ತಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡು ಸುಸ್ತಾಗಿ ಕುಸಿದು ಬಿದ್ದು ಅಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ದಾರಿಹೋಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಬಾಲಕಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವೇ ಗಂಟೆಯಲ್ಲಿ ಮಗು ಮೃತಪಟ್ಟಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮಕ್ಕಳ ಆಶ್ರಯ ಕೇಂದ್ರದಲ್ಲಿರುವ ಬಾಲಕಿ ಶಿಕ್ಷಣ ಮುಂದುವರೆಸಲು ಮುಂದಾಗಿದ್ದಾಳೆ ಎನ್ನಲಾಗಿದೆ.