ಬೆಂಗಳೂರು: ರೈಲು ನಿಲ್ದಾಣದಲ್ಲಿ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕರು ಇದನ್ನು ತಡೆಯಲು ಬಂದ ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.
ಬೆಂಗಳೂರು ವೈಟ್ ಫೀಲ್ಡ್ ರೈಲು ನಿಲ್ದಾಣದಲ್ಲಿ ಘಟನೆ ನಡೆದಿದೆ. ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ ಕಿರಣ್ ಕುಮಾರ್ ಗುರ್ಜಾರ್(30) ಹಲ್ಲೆಗೊಳಗಾಗಿದ್ದಾರೆ. ಜೂನ್ 2 ರಂದು ರಾತ್ರಿ 1 ಗಂಟೆ ಸುಮಾರಿಗೆ ರೈಲು ನಿಲ್ದಾಣದ ಬುಕಿಂಗ್ ಕೌಂಟರ್ ಬಳಿ ಮೂವರು ಯುವಕರು, ಇಬ್ಬರು ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.
ಈ ವೇಳೆ ಸ್ಥಳಕ್ಕೆ ಧಾವಿಸಿದ ಕಿರಣ್ ಕುಮಾರ್ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ವರ್ತಿಸಬಾರದು. ನಿಲ್ದಾಣದಿಂದ ಹೊರ ಹೋಗಿ ಎಂದು ತಾಕೀತು ಮಾಡಿದ್ದಾರೆ. ಈ ವೇಳೆ ಕಿರಣ್ ಜೊತೆಗೆ ಜಗಳವಾಡಿದ ಯುವಕರು ಚಾಕುವಿನಿಂದ ಇರಿಯಲು ಯತ್ನಿಸಿದ್ದು ಕೈಗೆ ಗಾಯವಾಗಿದೆ. ಉಳಿದ ಸಿಬ್ಬಂದಿ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.