ಬೆಂಗಳೂರು: ರಾಜ್ಯ ಸರ್ಕಾರ ಜುಲೈ 14 ರಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ಡೌನ್ ಜಾರಿಮಾಡಿದೆ.
ಜುಲೈ 14 ರಂದು ರಾತ್ರಿ 8 ಗಂಟೆಯಿಂದ 22 ರಂದು ಬೆಳಗ್ಗೆ 5 ಗಂಟೆಯವರೆಗೆ 7 ದಿನಗಳ ಲಾಕ್ ಡೌನ್ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಲಾಕ್ಡೌನ್ ಜಾರಿ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಅಗತ್ಯ ಸೇವೆ ಹೊರತಾದ ಎಲ್ಲಾ ಚಟುವಟಿಕೆ ನಿರ್ಬಂಧಿಸಲಾಗಿದೆ.
ರಾಜ್ಯ ಸರ್ಕಾರದ ಕಚೇರಿಗಳು, ಸ್ವಾಯತ್ತ ಸಂಸ್ಥೆಗಳು, ನಿಗಮ ಮೊದಲಾದವು ಮುಚ್ಚಿರಲಿವೆ. ಆರೋಗ್ಯ ವೈದ್ಯಕೀಯ ಶಿಕ್ಷಣ, ಪೊಲೀಸ್, ಗೃಹರಕ್ಷಕದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆ ವಿಪತ್ತು ನಿರ್ವಹಣೆ, ಬಿಬಿಎಂಪಿ ಹಾಗೂ ಕಾರಾಗೃಹಗಳು ಕಾರ್ಯನಿರ್ವಹಿಸಲಿವೆ.
ವಿದ್ಯುತ್, ನೀರು, ನೈರ್ಮಲ್ಯ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಕೇಂದ್ರ ಸರ್ಕಾರದ ಕಚೇರಿಗಳು, ಅದರ ಅಧೀನ ಕಛೇರಿಗಳು, ಸಾರ್ವಜನಿಕ ಸಂಸ್ಥೆಗಳನ್ನು ಮುಚ್ಚಿರಬೇಕು. ರೈತರು, ಕೃಷಿ ಕಾರ್ಮಿಕರು ತಮ್ಮ ಕೃಷಿ ಜಮೀನಿನಲ್ಲಿ ಕಾರ್ಯನಿರ್ವಹಿಸಬಹುದು.
ಕನಿಷ್ಠ ಬೆಂಬಲ ಬೆಲೆ ಪ್ರವರ್ತಕರು ಸೇರಿದಂತೆ ಕೃಷಿ ಉತ್ಪನ್ನಗಳಿಗೆ ನಿರ್ಬಂಧವಿಲ್ಲ. ಕಂಟೇನ್ಮೆಂಟ್ ವಲಯದ ಹೊರಗೆ ಕೃಷಿ ಮತ್ತು ಕೃಷಿಗೆ ಸಂಬಂಧಿತ ಚಟುವಟಿಕೆ ಕೈಗೊಳ್ಳಬಹುದು. ಮೀನುಗಾರಿಕೆ ಚಟುವಟಿಕೆ ಕೈಗೊಳ್ಳಬಹುದು. ನಿಗದಿಯಾಗಿರುವ ವಿಮಾನ ರೈಲು ಸಂಚಾರ ಹೊರತುಪಡಿಸಿ ಹೊಸ ವಿಮಾನ ಮತ್ತು ರೈಲು ಸಂಚಾರಕ್ಕೆ ಅವಕಾಶ ಇರುವುದಿಲ್ಲ. ತುರ್ತು ಕೆಲಸಕ್ಕೆ ಹೊರತುಪಡಿಸಿ ಟ್ಯಾಕ್ಸಿ, ಆಟೋ, ಬಸ್ ಸಂಚಾರ, ಕೋಚಿಂಗ್ ಸೆಂಟರ್, ಶಾಲಾ-ಕಾಲೇಜು ಇರಲ್ಲ.
ಹೋಟೆಲ್, ರೆಸ್ಟೋರೆಂಟ್, ಸಿನಿಮಾ ಮಂದಿರ, ಶಾಪಿಂಗ್ ಮಾಲ್, ಕ್ರೀಡಾ ಸಂಕೀರ್ಣ ಇರಲ್ಲ. ರಾಜ್ಯದ ಹೊರಗೆ, ರಾಜ್ಯದೊಳಗೆ ಅನುಮತಿಸಿದ ಸಂದರ್ಭದಲ್ಲಿ ಮಾತ್ರ ಪ್ರಯಾಣಿಕ ವಾಹನಗಳು ಸಂಚರಿಸುವುದು. ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಪಡಿತರ ಅಂಗಡಿಗಳನ್ನು ತೆರೆಯಬಹುದು.