ಬೆಂಗಳೂರು ಪ್ರದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ ಲಾಕ್ ಡೌನ್ ಜುಲೈ 22ರ ಇಂದು ಬೆಳಗ್ಗೆ 5 ಗಂಟೆಗೆ ಮುಕ್ತಾಯವಾಗಿದೆ.
ಇಂದಿನಿಂದ ಲಾಕ್ ಡೌನ್ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಸೋಂಕು ಪತ್ತೆ ಹಚ್ಚುವಿಕೆ, ಪರೀಕ್ಷೆ, ಟ್ರ್ಯಾಕಿಂಗ್, ತಾಂತ್ರಿಕತೆ ಉಪಯೋಗಿಸಿ ಚಿಕಿತ್ಸೆ ನೀಡುವುದು, ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ಇತರೆ ಸಿಬ್ಬಂದಿಗಳನ್ನೊಳಗೊಂಡ ಮಾನವ ಸಂಪನ್ಮೂಲ ನಿಯೋಜಿಸುವ ಮೂಲಕ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಂಡು ಆರೋಗ್ಯ ಸೇವಾ ಸೌಲಭ್ಯವನ್ನು ಹೆಚ್ಚಿಸಲಾಗಿದೆ.
ಅನ್ಲಾಕ್ 2.0 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಭಾನುವಾರದ ಲಾಕ್ಡೌನ್ ಮುಂದುವರೆಯಲಿದೆ. ಜನಸಂದಣಿಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ತರಕಾರಿ ಮಾರುಕಟ್ಟೆಗಳನ್ನು ಎಪಿಎಂಸಿ ಅಥವಾ ಸೂಕ್ತ ವಿಶಾಲ ಪ್ರದೇಶಗಳಿಗೆ ಸ್ಥಳಾಂತರಿಸಲಾಗುವುದು.
ಉದ್ಯಾನವನಗಳಲ್ಲಿ ಜಿಮ್ ಸಲಕರಣೆ ಮತ್ತು ಕುಳಿತುಕೊಳ್ಳುವ ಬೆಂಚುಗಳ ಬಳಸುವಿಕೆ ನಿಷೇಧಿಸಲಾಗಿದೆ. ಜಿಲ್ಲಾಡಳಿತಗಳಿಂದ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುವವರೆಗೆ ಜುಲೈ 31 ರವರೆಗೆ ಅನ್ಲಾಕ್ 2.0 ಮಾರ್ಗಸೂಚಿಗಳು ಜಾರಿಯಲ್ಲಿರುತ್ತದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.