ಬೆಂಗಳೂರು: ಮಹಾನಗರದಲ್ಲಿ ಭಾರಿ ಮಳೆಯಿಂದ ಜನ ತತ್ತರಿಸಿಹೋಗಿದ್ದಾರೆ. ನಗರದಲ್ಲಿ ಸುರಿದ ಮಹಾ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು ಹಲವು ರಸ್ತೆಗಳು ಕೆರೆಯಂತಾಗಿವೆ. ಅಂಡರ್ ಪಾಸ್ ಗಳು ಜಲಾವೃತಗೊಂಡಿದೆ.
ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರಿಗೆ ಸಮಸ್ಯೆಯಾಗಿದೆ. ರಸ್ತೆಯಲ್ಲಿ ಭಾರೀ ಪ್ರಮಾಣದ ನೀರು ಹರಿದು ವಾಹನ ಸವಾರರು ಪರದಾಟ ನಡೆಸುವಂತಾಗಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದ ಹಲವು ಭಾಗದಲ್ಲಿ ಭಾರಿ ಮಳೆ ಮುಂದುವರೆದಿದೆ. ಬೆಂಗಳೂರಿನಲ್ಲಿ ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಭಾರಿ ಮಳೆಯಾಗಿದ್ದು ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಬೆಂಗಳೂರಿನ ಆರ್.ಟಿ. ನಗರ, ಸಂಜಯನಗರ, ಲಕ್ಕಸಂದ್ರ, ಯಲಹಂಕ, ಕೋರಮಂಗಲ, ಜ್ಞಾನಭಾರತಿ, ಚಾಮರಾಜಪೇಟೆ, ಯಶವಂತಪುರ, ವಿದ್ಯಾರಣ್ಯಪುರ, ಮಲ್ಲೇಶ್ವರಂ ಮೊದಲಾದ ಭಾಗದಲ್ಲಿ ಭಾರಿ ಮಳೆಯಾಗಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ ಎಂದು ಹೇಳಲಾಗಿದೆ.