ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ಅಣ್ಣನ ಮಗಳು ಎಂದು ಹೇಳಿಕೊಂಡು ವಂಚಿಸಿದ್ದ ಮಹಿಳೆಯನ್ನು ಬೆಂಗಳೂರು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.
ಪಲ್ಲವಿ ಬಂಧಿತ ಆರೋಪಿ ಎಂದು ಹೇಳಲಾಗಿದೆ. ವಿದ್ಯಾವಂತ ನಿರುದ್ಯೋಗಿ ಯುವಕರನ್ನು ಗುರಿಯಾಗಿಸಿಕೊಂಡಿದ್ದ ಪಲ್ಲವಿ ಸ್ವಯಂ ಉದ್ಯೋಗ ಸ್ಥಾಪನೆಗೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 10 ಲಕ್ಷ ಸಾಲ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದಳು.
ತಾನು ಸಮಾಜಸೇವಕಿ ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದ ಪಲ್ಲವಿ, ರಾಜಶೇಖರ್ ಎಂಬುವರನ್ನು ಪರಿಚಯಿಸಿಕೊಂಡು ಅವರ ಸಂಬಂಧಿಯ ಕಾರನ್ನು ಬಾಡಿಗೆಗೆ ಪಡೆದು ಸುತ್ತಾಡಿದ್ದಾಳೆ. 4 ಲಕ್ಷ ರೂಪಾಯಿ ಬಾಡಿಗೆ ಬಾಕಿ ಉಳಿಸಿಕೊಂಡಿದ್ದ ಆಕೆ ಬಾಡಿಗೆ ಕೇಳಿದಾಗ ಕಾರ್ ಚಾಲಕ ಯೋಗೇಶ್ ನನ್ನು ಪ್ರೀತಿಸುವುದಾಗಿ ಹೇಳಿಕೊಂಡಿದ್ದಾಳೆ.
ನಾನು ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ ಅಣ್ಣನ ಮಗಳು ಎಂದು ಹೇಳಿಕೊಂಡಿದ್ದ ಪಲ್ಲವಿ ತನಗೆ ರಾಮನಗರ, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಕಡೆ ಆಸ್ತಿ ಆಸ್ತಿ ಇದೆ. ನನ್ನನ್ನು ಮದುವೆಯಾಗದಿದ್ದರೆ ರೇಪ್ ಕೇಸ್ ಹಾಕಿಸುವುದಾಗಿ ಕಿರುಕುಳ ನೀಡಿದ್ದಾಳೆ. ಇದರಿಂದ ಕಂಗಾಲಾದ ಚಾಲಕ ಯೋಗೇಶ್ ಕಾರ್ ಮಾಲೀಕ ಜನಾರ್ಧನ್ ಅವರಿಗೆ ಮಾಹಿತಿ ನೀಡಿದ್ದಾರೆ.
ಪರಮೇಶ್ವರ ಹೆಸರು ಹೇಳಿಕೊಂಡು ವಂಚಿಸಿ ಬಾಡಿಗೆ ನೀಡಲು ಸತಾಯಿಸುತ್ತಿದ್ದ ಪಲ್ಲವಿ ಅತ್ಯಾಚಾರ ಕೇಸು ದಾಖಲಿಸುವುದಾಗಿ ಬೆದರಿಸಿದ್ದಾಳೆ. ಪಲ್ಲವಿಯನ್ನು ಪರಮೇಶ್ವರ್ ನಿವಾಸಕ್ಕೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಅವರ ಪತ್ನಿ ಪಲ್ಲವಿ ತಮ್ಮ ಸಂಬಂಧಿಯಲ್ಲ ಎಂದು ತಿಳಿಸಿದ್ದಾರೆ.
ಬಳಿಕ ತುಮಕೂರಿನಲ್ಲಿ ಇದ್ದ ಪರಮೇಶ್ವರ್ ಅವರ ಬಳಿಗೆ ಆಕೆಯನ್ನು ಕರೆದುಕೊಂಡು ಹೋಗಿ ವಿಚಾರಿಸಿದಾಗ ದೂರು ನೀಡಲು ತಿಳಿಸಿದ್ದಾರೆ. ನಂತರ ಪಲ್ಲವಿ ತನ್ನನ್ನು ಅಪಹರಣ ಮಾಡಲಾಗುತ್ತಿದೆ ಎಂದು ನಾಟಕವಾಡಿ ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿದ್ದಾಳೆ. ತನ್ನನ್ನು ಅಪಹರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದು, ಪೊಲೀಸರು ಯೋಗೇಶ್ ಗೆ ಕರೆ ಮಾಡಿ ಪೊಲೀಸ್ ಠಾಣೆಗೆ ಬರುವಂತೆ ಸೂಚಿಸಿದ್ದಾರೆ. ಠಾಣೆಗೆ ಬಂದ ಅವರನ್ನು ವಿಚಾರಿಸಿದಾಗ ಇದೆಲ್ಲಾ ಸಂಗತಿ ಗೊತ್ತಾಗಿದೆ ಎನ್ನಲಾಗಿದೆ.