ಬೆಂಗಳೂರು: ಕೊರೊನಾ ಸೋಂಕು ತಡೆಗೆ ಭಾನುವಾರ ಲಾಕ್ ಡೌನ್ ಜಾರಿ ಮಾಡಲಾಗಿದೆ. ಮಾರ್ಚ್, ಏಪ್ರಿಲ್ ನಲ್ಲಿ ಕಠಿಣ ಲಾಕ್ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ಜನ ಊಟ, ಕೆಲಸಕ್ಕಾಗಿ ಪರದಾಟ ನಡೆಸುವಂತಾಗಿತ್ತು.
ಸದ್ಯ ಪ್ರತಿ ಭಾನುವಾರ ಲಾಕ್ಡೌನ್ ಜಾರಿ ಘೋಷಣೆ ಮಾಡಿದ್ದು, ಕೊರೋನಾ ಸೋಂಕು ಹೆಚ್ಚುತ್ತಿರುವುದರಿಂದ ದೀರ್ಘಾವಧಿ ಲಾಕ್ ಡೌನ್ ಜಾರಿ ಮಾಡುವ ಮುನ್ಸೂಚನೆ ಇದಾಗಿದೆ ಎಂದು ಭಾವಿಸಿದ ಅನೇಕರು ಬೆಂಗಳೂರು ತೊರೆದು ಊರಿಗೆ ತೆರಳಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಬೆಂಗಳೂರಿನಿಂದ ಜನ ಗುಳೆ ಹೊರಟಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆ ಮುಗಿದ ನಂತರ ಸಂಪೂರ್ಣ ಲಾಕ್ ಡೌನ್ ಜಾರಿಯಾಗಬಹುದು ಕಾರಣದಿಂದ ಸಾವಿರಾರು ಜನ ಮನೆ ಖಾಲಿ ಮಾಡಿ ಊರಿನತ್ತ ಹೊರಟು ಹೋಗಿದ್ದಾರೆ.
ಬೆಂಗಳೂರಿನಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಜನ ನೆಲೆ ಕಂಡುಕೊಂಡಿದ್ದು ಕೊರೋನಾ ಕಾರಣದಿಂದ ಜೀವ ಉಳಿಸಿಕೊಂಡರೇ ಸಾಕೆಂದು ಊರಿಗೆ ತೆರಳಿದ್ದಾರೆ. ಇನ್ನು ಕೆಲಸದ ಅನಿವಾರ್ಯತೆಯಿಂದ ಬೆಂಗಳೂರಿನಲ್ಲಿ ಉಳಿದುಕೊಂಡವರು ಕುಟುಂಬದವರನ್ನು ಊರಿಗೆ ಕಳುಹಿಸಿದ್ದಾರೆ. ಒಬ್ಬರೇ ಬೆಂಗಳೂರಿನಲ್ಲಿ ಉಳಿದಿದ್ದಾರೆ. ಸುಮಾರು 5 ಲಕ್ಷಕ್ಕೂ ಅಧಿಕ ಕಾರ್ಮಿಕರು, ನೌಕರರು ಬೆಂಗಳೂರಿಂದ ಊರಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.