ಬೆಂಗಳೂರುನಲ್ಲಿರುವ ವಲಸೆ ಕಾರ್ಮಿಕರ ಮಕ್ಕಳಿಗೆ ಕೊರೊನಾ ಸೋಂಕಿನ ಸಂಕಷ್ಟದ ಸಮಯದಲ್ಲೂ ಶಿಕ್ಷಣ ಸಿಗಬೇಕೆಂಬ ಮಹದಿಚ್ಛೆಯಿಂದ ಪೊಲೀಸ್ ಅಧಿಕಾರಿಯೊಬ್ಬರು ಶಿಕ್ಷಕರ ಪಾತ್ರವನ್ನೂ ವಹಿಸಿ ಮೆಚ್ಚುಗೆ ಗಳಿಸಿದ್ದಾರೆ.
ಕೊರೊನಾದಿಂದಾಗಿ ಒಂದೆಡೆ ಶಾಲೆಗಳು ಆರಂಭವಾಗಿಲ್ಲ, ಇನ್ನೊಂದೆಡೆ ಆನ್ ಲೈನ್ ಶಿಕ್ಷಣ ಪಡೆಯಲು ವಲಸೆ ಕಾರ್ಮಿಕರ ಮಕ್ಕಳ ಬಳಿ ಸವಲತ್ತುಗಳಿಲ್ಲ. ಇಷ್ಟಕ್ಕಾಗಿ ಈ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುವುದೂ ಇಷ್ಟವಿಲ್ಲ.
ಹೀಗಾಗಿ ಅನ್ನಪೂರ್ಣೇಶ್ವರಿ ನಗರದಲ್ಲಿ ಸಬ್ ಇನ್ ಸ್ಪೆಕ್ಟರ್ ಶಾಂತಪ್ಪ, ಕರ್ತವ್ಯಕ್ಕೆ ಹಾಜರಾಗುವ ಮೊದಲು ಅಲ್ಲಿರುವ ವಲಸೆ ಕಾರ್ಮಿಕರ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ.
ವಲಸೆ ಕಾರ್ಮಿಕರ ಮಕ್ಕಳಿಗೂ ಶಿಕ್ಷಣ ಒಂದು ಹಕ್ಕು. ಅದು ಅವರಿಗೆ ಸಿಗದಂತಾಗಬಾರದು. ಶಾಲೆಗೆ ಹೋಗದಿರುವುದು ಅಥವಾ ಆನ್ ಲೈನ್ ಶಿಕ್ಷಣ ಪಡೆಯಲು ಅನುಕೂಲ ಇಲ್ಲದಿರುವುದು ಅವರ ಸಮಸ್ಯೆಯಲ್ಲ. ಪೋಷಕರೊಂದಿಗೆ ಅವರೂ ಕಾರ್ಮಿಕರಾಗಬಾರದು. ಶಿಕ್ಷಣ ಮೊದಲ ಆದ್ಯತೆ ಆಗಿರಬೇಕು ಎನ್ನುತ್ತಾರೆ ಪಿಎಸ್ಐ ಶಾಂತಪ್ಪ.