ಬೆಂಗಳೂರು: ಬೆಂಗಳೂರಿನಿಂದ ಯಾರೂ ಊರುಗಳಿಗೆ ಹೋಗಬೇಡಿ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಬೆಂಗಳೂರು ಜನತೆಗೆ ಮನವಿ ಮಾಡಿರುವ ಸಿಎಂ, ಇನ್ನೂ ಅನೇಕ ತಿಂಗಳು ಕೋರೋಣ ವಿರುದ್ಧ ಹೋರಾಡಬೇಕಿದೆ. ನಮ್ಮ ಅಧಿಕಾರಿಗಳು, ಪೊಲೀಸರು ಸೇರಿದಂತೆ ಎಲ್ಲ ಸಿಬ್ಬಂದಿ ಕೊರೋನಾ ತಡೆಯುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಜನತೆ ವಿಶ್ವಾಸ ಕಳೆದುಕೊಳ್ಳದೆ ನಮ್ಮೊಂದಿಗೆ ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.
ಶಾಸಕರು ಕೊರೋನಾ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಬಿಐಇಸಿಯಲ್ಲಿ ನಿರ್ಮಿಸಿದ 10,100 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಪರಿಶೀಲನೆ ವೇಳೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಜನ ತಾಳ್ಮೆಯಿಂದಿರಬೇಕು. ವಿಶ್ವಾಸ ಕಳೆದುಕೊಳ್ಳಬಾರದು. ಆಂಬುಲೆನ್ಸ್ ವಿಳಂಬ ಸೇರಿದಂತೆ ವೈದ್ಯಕೀಯ ವಿಚಾರದಲ್ಲಿ ಸಮಸ್ಯೆಯಾದರೆ ಜನತೆ ಅದನ್ನು ಕೂಡಲೇ ಸರ್ಕಾರದ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳುತ್ತೇವೆ.
ಬೆಂಗಳೂರು ತೊರೆದು ಹಳ್ಳಿಗಳಿಗೆ ಜನತೆ ಹೋಗಬಾರದು. ಕೊರೊನಾ ವಿರುದ್ದ ಒಟ್ಟಾಗಿ ಹೋರಾಡಬೇಕಿದೆ. ಇನ್ನೂ ಹಲವು ತಿಂಗಳು ನಾವು ಕೊರೊನಾ ವಿರುದ್ದ ಸೆಣಸಬೇಕಿದೆ. ಸರ್ಕಾರ ನಿಮ್ಮ ಜತೆ ಇದೆ. ಯಾರೂ ಸಹ ಹೆದರಬೇಕಿಲ್ಲ. ಜನರ ಆರೋಗ್ಯ ಕಾಪಾಡುವ ಜವಾಬ್ದಾರಿ ನಮ್ಮದು. ಇನ್ನೊಂದು ವಾರದಲ್ಲಿ ಕೋವಿಡ್ ಕೇರ್ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದ್ದಾರೆ.