ಬೆಂಗಳೂರು: ಕೊರೊನಾ ವೈರಸ್ ನಿಂದ ಬಚಾವಾಗಲು ಮಾರ್ಚ್ 24 ರಿಂದ ಇಡೀ ದೇಶವನ್ನು ಲಾಕ್ಡೌನ್ ಮಾಡಲಾಗಿತ್ತು. ಆಗ ಚರ್ಚ್, ಮಸೀದಿ, ದೇವಾಲಯ, ಗುರುದ್ವಾರಗಳೂ ಬಂದ್ ಆಗಿದ್ದವು. ಈಗ ಜೂನ್ 1 ರಿಂದ ಅನ್ಲಾಕ್ ಪ್ರಾರಂಭವಾಗಿದ್ದು, ಹಂತ ಹಂತವಾಗಿ ಎಲ್ಲ ಕಾರ್ಯಗಳನ್ನೂ ಪ್ರಾರಂಭಿಸಲಾಗುತ್ತಿದೆ. ಸಾಮಾಜಿಕ ಅಂತರ, ಸ್ಯಾನಿಟೈಸರ್ ವ್ಯವಸ್ಥೆಯೊಂದಿಗೆ ಪ್ರಾರ್ಥನೆ ನಡೆಸುವಂತೆ ಸರ್ಕಾರ ಸೂಚಿಸಿದೆ.
ಬೆಂಗಳೂರಿನ ಹೆಬ್ಬಾಳದಲ್ಲಿರುವ ಅಂತಾರಾಷ್ಟ್ರೀಯ ಮಟ್ಟದ ಪ್ರಾರ್ಥನಾ ಮಂದಿರ ಬೇಥೆಲ್ ಎಜಿ ಚರ್ಚ್ ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಭಾನುವಾರದ ಸಾಮೂಹಿಕ ಪ್ರಾರ್ಥನೆಗೆ ವಿಭಿನ್ನ ವಿಧಾನ ಅನುಸರಿಸಲಾಗಿದೆ.
“ವರ್ಷಿಪ್ ಆನ್ ವೀಲ್” ಎಂಬ ವಿಧಾನ ಇದಾಗಿದೆ. ಚರ್ಚ್ ಆವರಣದೊಳಗೆ ಎಲ್ಲ ವಾಹನಗಳನ್ನು ಒಟ್ಟಿಗೆ ನಿಲ್ಲಿಸಿ ಅದರಲ್ಲಿಯೇ ಪ್ರಾರ್ಥನೆ ನಡೆಸಲಾಗುತ್ತದೆ. ಕುಳಿತುಕೊಳ್ಳುವ ವ್ಯವಸ್ಥೆ ಇಲ್ಲ. ಶ್ರದ್ಧಾಳುಗಳಿಗೆ ಅನುಕೂಲವಾಗುವಂತೆ ಅಲ್ಲಲ್ಲಿ ಪರದೆಗಳನ್ನು ಮೈಕ್ ಗಳನ್ನು ಅಳವಡಿಸಲಾಗಿದ್ದು, ಧರ್ಮ ಬೋಧೆಯ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಬೈಕ್ ನಲ್ಲಿ ಬರುವವರಿಗೆ ಬೆಳಗ್ಗೆ 7 ರಿಂದ ಸಾಯಂಕಾಲ 5 ಗಂಟೆ, ಕಾರಿನಲ್ಲಿ ಬರುವವರಿಗೆ ಬೆಳಗ್ಗೆ 9 ಗಂಟೆಯಿಂದ ಸಾಯಂಕಾಲ 9 ಗಂಟೆ, ಬಸ್ ಮುಂತಾದವುಗಳಿಂದ ಬರುವವರಿಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ ಎಂದು ಸಮಯ ನಿಗದಿ ಮಾಡಲಾಗಿದೆ.
“ನಮ್ಮ ಹೊಸ ಸಾಮೂಹಿಕ ಪ್ರಾರ್ಥನಾ ವಿಧಾನ ಶೇ.100 ರಷ್ಟು ಸುರಕ್ಷಿತವಾಗಿದೆ. ಎಲ್ಲರನ್ನೂ ಒಟ್ಟಿಗೆ ಸೇರಿಸುತ್ತದೆ, ಆದರೆ, ಸುರಕ್ಷಿತವಾಗಿಡುತ್ತದೆ. ಇದಕ್ಕಾಗಿ ಬೇಕಾದ ಎಲ್ಲ ಪರವಾನಗಿಗಳನ್ನೂ ನಾವು ಪಡೆದಿದ್ದೇವೆ” ಎಂದು ರೆವರೆಂಡ್ ಜೋಹಾನ್ಸನ್ ಮಾಧ್ಯಮಕ್ಕೆ ಹೇಳಿದ್ದಾರೆ.