ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿಯರಾದ ರಾಗಿಣಿ, ಸಂಜನಾ ಅವರನ್ನು ಬಿಡುಗಡೆ ಮಾಡಬೇಕು. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಕೋರರ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ನ್ಯಾಯಾಧೀಶರು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಪತ್ರ ಕಳಿಸಲಾಗಿದೆ.
ಎನ್.ಡಿ.ಪಿ.ಎಸ್. ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಪೊಲೀಸ್ ಆಯುಕ್ತರು, ಜಂಟಿ ಆಯುಕ್ತರಿಗೆ ಸ್ಪೋಟಕ ವಸ್ತುಗಳ ಸಮೇತ ಬೆದರಿಕೆ ಪತ್ರ ಕಳುಹಿಸಲಾಗಿದೆ.
ಬೆಂಗಳೂರಿನ ಎನ್.ಡಿ.ಪಿ.ಎಸ್. ವಿಶೇಷ ಕೋರ್ಟ್ ನ್ಯಾಯಾಧೀಶರಾದ ಸೀನಪ್ಪ, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್, ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಬೆದರಿಕೆ ಪತ್ರ ಬಂದಿದೆ. ತುಮಕೂರಿನಿಂದ ಅಂಚೆ ಮೂಲಕ ಅನಾಮಧೇಯ ಹೆಸರಿನಲ್ಲಿ ಬೆದರಿಕೆ ಪತ್ರ ಬರೆಯಲಾಗಿದೆ. ಸ್ಪೋಟಕದ ರೀತಿಯ ಕೆಲವು ವಸ್ತುಗಳನ್ನು ಕಳುಹಿಸಲಾಗಿದೆ. ಇದರ ಬೆನ್ನಲ್ಲೇ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನ್ಯಾಯಾಲಯದಲ್ಲಿ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದಿಂದ ತಪಾಸಣೆ ನಡೆಸಲಾಗಿದೆ. ಬೆದರಿಕೆ ಪತ್ರ ಕಳಿಸಿದ ಅನಾಮಧೇಯ ವ್ಯಕ್ತಿಯ ಪತ್ತೆಗಾಗಿ ಕ್ರಮಕೈಗೊಳ್ಳಲಾಗಿದೆ.