ಬೆಂಗಳೂರು: ಕೊರೊನಾ ವೈರಸ್ ವಿಶ್ವವನ್ನು ಕಂಗೆಡಿಸಿದೆ. ದೇಶದ ಗೃಹ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳನ್ನೂ ಈ ಸೋಂಕು ಬಿಟ್ಟಿಲ್ಲ.
ಇಂಥ ಸವಾಲಿನ ಪರಿಸ್ಥಿತಿಯಲ್ಲಿ ಎದುರು ನಿಂತು ಕೊರೊನಾ ಹೊಡೆದೋಡಿಸಲು ಪ್ರಯತ್ನ ಮಾಡುತ್ತಿರುವವರು ವೈದ್ಯರು, ವೈದ್ಯಕೀಯ ಸಿಬ್ಬಂದಿ. ಹಲವರು ಅವರನ್ನು ಪ್ರತ್ಯಕ್ಷ ದೇವರು ಎಂದು ಕರೆದಿದ್ದಾರೆ. ಗೌರವಿಸುತ್ತಿದ್ದಾರೆ.
ಬೆಂಗಳೂರಿನ ಮೂರ್ತಿ ಕಲಾವಿದರೊಬ್ಬರು ವೈದ್ಯರನ್ನು ದೇವರನ್ನಾಗಿ ಮಾಡಿ ತೋರಿಸಿದ್ದಾರೆ.
ಗಣೇಶ ಚತುರ್ಥಿ ದೇಶದೆಲ್ಲೆಡೆ ನಡೆಯುವ ಸಡಗರದ ಹಬ್ಬ ಈ ಸಂದರ್ಭದಲ್ಲಿ ಮನೆ, ಮನೆಯಲ್ಲೂ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುವ ರೂಢಿ ಇದೆ. ಪ್ರತಿ ವರ್ಷ ಗಣೇಶ ಚತುರ್ಥಿಗೆ ಕಲಾವಿದರು ವಿಭಿನ್ನ ಸ್ವರೂಪದ ಮೂರ್ತಿ ತಯಾರಿಸಿ ಸುದ್ದಿಯಾಗುತ್ತಾರೆ.
ಈ ಬಾರಿ ಆ. 22 ರಂದು ಗಣೇಶ ಚತುರ್ಥಿ ನಡೆಯಲಿದ್ದು, ಹಲವು ಮೂರ್ತಿ ತಯಾರಕರು ವಿಗ್ರಹ ತಯಾರಿಸುತ್ತಿದ್ದಾರೆ. ಬೆಂಗಳೂರಿನ ಶ್ರೀಧರ ಎಂಬ ಮೂರ್ತಿ ಕಲಾವಿದರು ವೈದ್ಯರ ಸ್ವರೂಪದ ಗಣೇಶ ಮೂರ್ತಿ ತಯಾರಿಸಿ ಗಮನ ಸೆಳೆದಿದ್ದಾರೆ. ಬಿಳಿ ಕೋಟು ಹಾಕಿ, ಸ್ಟೆತಸ್ಕೋಪ್ ಹಿಡಿದ ಗಣೇಶ ರೋಗಿಯೊಬ್ಬರ ತಪಾಸಣೆ ಮಾಡುವಂತೆ ಮೂರ್ತಿ ಮಾಡಲಾಗಿದೆ. ಇಷ್ಟೇ ಅಲ್ಲದೆ. ಕೊರೊನಾ ವೈರಸ್ ಹಿಡಿತದಲ್ಲಿಟ್ಟುಕೊಳ್ಳುವ ಗಣೇಶ, ಮಾಸ್ಕ್ ಹಾಕಿದ ಆರೋಗ್ಯ ಸಿಬ್ಬಂದಿ ಮೂರ್ತಿಗಳನ್ನೂ ಶ್ರೀಧರ್ ತಯಾರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.