ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 53 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣ ಮತ್ತು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದ ನವೀನ್ ಮನೆ ಎದುರು ಗಲಭೆ ನಡೆಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಯಾರದೋ ಪೋಸ್ಸ್ ಗೆ ನವೀನ್ ಕಾಮೆಂಟ್ ಹಾಕಿದ್ದೇ ಗಲಭೆಗೆ ಕಾರಣವೆನ್ನಲಾಗಿದೆ. ಸಿಟ್ಟಿನ ಭರದಲ್ಲಿ ನವೀನ್ ಮಾಡಿದ ರಿಪ್ಲೈನಿಂದ ಗಲಾಟೆ ಆರಂಭವಾಗಿದೆ. ಮುರುಗೇಶ್ ನಿರಾಣಿ ವಿಡಿಯೋ ಆಧರಿಸಿ ಫೇಸ್ಬುಕ್ ಪೋಸ್ಟ್ ಮಾಡಲಾಗಿತ್ತು. ಫೇಸ್ಬುಕ್ ನಲ್ಲಿ ಫೈರೋಜ್ ಪಾಶಾ ಎಂಬಾತ ಪೋಸ್ಟ್ ಮಾಡಿದ್ದು ಆತನ ಪೋಸ್ಟ್ ನೋಡಿ ಸಿಟ್ಟು ಮಾಡಿಕೊಂಡಿದ್ದ ನವೀನ್ ಗೂಗಲ್ ನಲ್ಲಿ ಇಮೇಜ್ ಡೌನ್ಲೋಡ್ ಮಾಡಿದ್ದ. ಆಕ್ಷೇಪಾರ್ಹ ಚಿತ್ರದ ಮೂಲಕ ಪಾಷಾ ಪೋಸ್ಟ್ ಗೆ ಕಮೆಂಟ್ ಹಾಕಿದ್ದ.
ಆಗಸ್ಟ್ 11 ರಂದು ಸಂಜೆ 5.45 ಕ್ಕೆ ನವೀನ್ ಕಮೆಂಟ್ ಮಾಡಿ ಬಳಿಕ ಮನೆಯಲ್ಲಿ ಉಳಿದುಕೊಂಡಿದ್ದ. 6 ಗಂಟೆಗೆ ನವೀನ್ ಗೆ ಅಪರಿಚಿತ ನಂಬರ್ ಗಳಿಂದ ಕರೆ ಬರಲು ಶುರುವಾಗಿದೆ. ಆರಂಭದಲ್ಲಿ ನವೀನ್ ಗೆ ಕರೆ ಮಾಡಿ ಕಾಮೆಂಟ್ ಡಿಲೀಟ್ ಮಾಡಲು ಸೂಚನೆ ನೀಡಲಾಗಿದೆ. ಇಬ್ಬರು ಸ್ನೇಹಿತರು ಕೂಡ ಕರೆ ಮಾಡಿ ಕಮೆಂಟ್ ಡಿಲೀಟ್ ಮಾಡಲು ಸೂಚಿಸಿದ್ದಾರೆ.
ಇದೇ ವೇಳೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ವಿಚಾರ ಗೊತ್ತಾಗಿದೆ. ಮುಸ್ಲಿಂ ಮುಖಂಡರು ಶಾಸಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ನವೀನ್ ಗೆ ಕರೆ ಮಾಡಿದ ಅಖಂಡ ಶ್ರೀನಿವಾಸಮೂರ್ತಿ ಪೋಸ್ಟ್ ಡಿಲೀಟ್ ಮಾಡುವಂತೆ ತಿಳಿಸಿದ್ದಾರೆ.
ತಕ್ಷಣವೇ ಕಾಮೆಂಟ್ ಡಿಲೀಟ್ ಮಾಡಲು ನವೀನ್ ಗೆ ಶಾಸಕರು ಸೂಚನೆ ನೀಡಿದ್ದು ತನ್ನ ಮಾವ ಸೂಚಿಸುತ್ತಿದ್ದಂತೆಯೇ ನವೀನ್ ಕಮೆಂಟ್ ಡಿಲೀಟ್ ಮಾಡಿದ್ದಾನೆ. ಇದಕ್ಕೂ ಮೊದಲೇ ಕಮೆಂಟ್ ಸ್ಕ್ರೀನ್ ಶಾಟ್ ಸಹಿತ ಠಾಣೆಗೆ ದೂರು ನೀಡಲಾಗಿದೆ. ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ತೆರಳಿದ ಮುಜಾಮಿಲ್ ಮತ್ತು ಸಹಚರರು ದೂರು ನೀಡಿದ್ದಾರೆ. ಈ ವೇಳೆಗೆ ಗಲಭೆಗೆ ಕಿಡಿಹೊತ್ತಿದೆ ಎಂದು ಹೇಳಲಾಗಿದೆ.