ಅದೃಷ್ಟ ಅನ್ನೋದು ಇದಕ್ಕೆ ನೋಡಿ. ಟೈಂ ಚೆನ್ನಾಗಿದ್ದರೆ ಭಿಕ್ಷುಕನು ಕೋಟ್ಯಾಧಿಪತಿಯಾಗಬಹುದು ಅಂತಾರೆ. ಇದು ಸತ್ಯವೂ ಹೌದು. ಇಂತಹ ಅನೇಕ ಘಟನೆಗಳು ನಮ್ಮ ಕಣ್ಣ ಮುಂದಿದೆ. ಆದರೆ ಈ ಘಟನೆ ಹಾಗಲ್ಲ. ಇಲ್ಲಿ ಭಿಕ್ಷುಕನಿಗೆ ಕೋಟಿ ಲಾಟರಿ ಹೊಡೆದಿಲ್ಲ. ಬದಲಾಗಿ ಚುನಾವಣೆಗೆ ಸ್ಪರ್ಧೆ ಮಾಡುವ ಅದೃಷ್ಟ ಲಭಿಸಿದೆ.
ಹೌದು, ಇಂತಹದೊಂದು ಅಪರೂಪದ ಘಟನೆ ನಂಜನಗೂಡಿನ ಬೊಕ್ಕಹಳ್ಳಿಯಲ್ಲಿ ನಡೆದಿದೆ. ಭಿಕ್ಷುಕನನ್ನು ಗ್ರಾಮ ಪಂಚಾಯ್ತಿ ಚುನಾವಣೆಗೆ ನಿಲ್ಲಿಸೋದಿಕ್ಕೂ ಕಾರಣ ಇದೆ. ಈ ಹಿಂದೆ ಅಧಿಕಾರಕ್ಕೆ ಬಂದವರು ಊರಿನ ಉದ್ಧಾರ ಮಾಡಿರಲಿಲ್ಲ. ಹೀಗಾಗಿ ಅಲ್ಲಿನ ಯುವಕರ ತಂಡ ಭಿಕ್ಷುಕನನ್ನು ಸ್ಪರ್ಧೆಗೆ ಇಳಿಸಿದ್ದಾರೆ.
40ರ ಆಸುಪಾಸಿನ ಅಂಕ ನಾಯಕ ಎಂಬ ಭಿಕ್ಷುಕ ಅದೇ ಊರಿನಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ಅಲ್ಲದೆ ಇವರು ಅಂಗವಿಕರಾಗಿರೋದ್ರಿಂದ ಊರಿನವರೂ ಇವರಿಗೆ ಸಹಾಯ ಮಾಡುತ್ತಿದ್ದರಂತೆ. ಇದೀಗ ಇವರನ್ನು ನಿಲ್ಲಿಸಿ ಊರಿನ ಉದ್ದಾರ ಮಾಡಬೇಕೆಂದುಕೊಂಡ ಯುವಕರ ತಂಡ ಭರ್ಜರಿಯಾಗಿ ಈತನನ್ನು ರೆಡಿ ಮಾಡಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಅದೇನೆ ಇರಲಿ, ಹಳ್ಳಿ ಅಭಿವೃದ್ಧಿ ಮಾಡ್ತೇವೆ ಎಂದು ಮತ ಹಾಕಿಸಿಕೊಂಡು ಗೆದ್ದ ನಂತರ ತಮ್ಮನ್ನು ತಾವು ಉದ್ಧಾರ ಮಾಡಿಕೊಳ್ಳುವ ಅನೇಕರಿಗೆ ಈ ಪ್ರಕರಣ ಒಂದು ಪಾಠವೇ ಸರಿ.