ಬಿಸಿಲ ಧಗೆ ತಡೆಯೋಕೆ ಆಗ್ತಿಲ್ಲ. ಇಂಥಾ ಟೈಂನಲ್ಲಿ ಪ್ರವಾಸಕ್ಕೆ ಹೋಗಬೇಕು ಅಂದ್ರೆ ನೀರಿರುವ ಸ್ಥಳವೇ ಬೆಸ್ಟ್. ಇದಕ್ಕಾಗಿ ನೀವು ಉಂಚಳ್ಳಿ ಜಲಪಾತವನ್ನ ಆಯ್ಕೆ ಮಾಡಿಕೊಳ್ಳಬಹುದು. ಅಘನಾಶಿನಿ ನದಿಯಿಂದ ಉಗಮವಾದ ಈ ಜಲಾಪಕ್ಕೆ ಲುಷಿಂಗ್ಟನ್ ಎಂದೂ ಹೆಸರಿದೆ.
ಉತ್ತರ ಕನ್ನಡ ಜಿಲ್ಲೆ ಶಿರಸಿಯಿಂದ ಕೇವಲ 30 ಮೀಟರ್ ದೂರದಲ್ಲಿ ಈ ಜಲಪಾತವಿದೆ. ಸಿದ್ದಾಪುರದಿಂದ ವಾಯುವ್ಯಕ್ಕೆ 19 ಕಿಲೋಮೀಟರ್ ದೂರದಲ್ಲಿದೆ. 1845ರಲ್ಲಿ ಬ್ರಿಟಿಷ್ ಅಧಿಕಾರಿ ಜೆ.ಟಿ. ಲುಷಿಂಗ್ಟನ್ ಈ ಜಲಪಾತವನ್ನ ಪತ್ತೆ ಮಾಡಿದ್ರು ಅನ್ನೋ ಕಾರಣಕ್ಕೆ ಇದಕ್ಕೆ ಲುಷಿಂಗ್ಟನ್ ಎಂಬ ಹೆಸರು ಬಂದಿದೆ. ಅಲ್ಲದೇ ಈ ಜಲಪಾತವು ಬೀಳುವಾಗ ಆಗು ಶಬ್ದದಿಂದಾಗಿ ಕೆಪ್ಪ ಜೋಗ ಅಂತಲೂ ಕರೆಯುತ್ತಾರೆ.
ಮಲೆನಾಡ ಮಡಿಲಿನಲ್ಲಿ ಸಂಪೂರ್ಣ ಹಸಿರಿನ ಮಧ್ಯದಲ್ಲೇ ಇರುವ ಈ ಜಲಪಾತವನ್ನ ಕಣ್ತುಂಬಿಕೊಳ್ಳೋದೇ ಪರಮಾನಂದ. ಇದೇ ಜಲಪಾತದಿಂದ ಕೇವಲ 1 ಕಿಲೋಮೀಟರ್ ದೂರದಲ್ಲಿ ಬುರುಡೆ ಜೋಗ ಇದೆ. ಇಲ್ಲೆಲ್ಲ ಹೋಗೋಕೆ ರಸ್ತೆ ಮಾರ್ಗ ಕೂಡ ಸರಿಯಾಗಿ ಇರೋದ್ರಿಂದ ನೀವು ಆರಾಮಾಗಿ ಪ್ರವಾಸ ಮಾಡಬಹುದು. ಮಳೆಗಾಲದಲ್ಲಿ ಇವುಗಳ ಸೌಂದರ್ಯ ನೋಡೋದು ಕಣ್ಣಿಗೆ ಹಬ್ಬವೇ ಸರಿ.