ಮೈಸೂರು: ಎಷ್ಟು ಪರಿಹಾರ ನೀಡಲು ಸಾಧ್ಯವೋ ಅಷ್ಟು ಪರಿಹಾರವನ್ನು ನೀಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಬೆಳೆ ನಷ್ಟ ಪರಿಹಾರ ವಿಚಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಅನುದಾನವನ್ನು ನೀಡಲಾಗಿದೆ. ಅದನ್ನು ಮೀರಿಯೂ ಅನುದಾನ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ನಡೆದ ಮೈಸೂರು ವಿಭಾಗದ 8 ಜಿಲ್ಲೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬೆಳೆ ನಷ್ಟ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರೈತರಿಗೆ ಅಗತ್ಯ ನೆರವು ನೀಡಿದೆ. ಎಷ್ಟು ಸಾಧ್ಯವೋ ಅಷ್ಟು ಅನುದಾನ ಕೊಡಲು ಪ್ರಯತ್ನ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಿವಿಧ ವಲಯಗಳಿಗೆ ಸರ್ಕಾರ ಅನುದಾನ ನೀಡಿದ್ದು, ಎಲ್ಲರಿಗೂ ಒಂದೇ ರೀತಿಯ ಪರಿಹಾರ ಕೊಡಲು ಆಗುವುದಿಲ್ಲ. ಯೂರಿಯಾ ಮತ್ತು ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದ 117 ಅಂಗಡಿಗಳ ಲೈಸೆನ್ಸ್ ರದ್ದು ಮಾಡಲಾಗಿದೆ. ನಕಲಿ ರಸಗೊಬ್ಬರ ಪಡೆದುಕೊಂಡಿದ್ದರೆ ಬೆಳೆ ನಷ್ಟವಾದ ಸಂದರ್ಭದಲ್ಲಿ ಮಾರಾಟಗಾರರಿಂದ ನಷ್ಟ ಭರಿಸಲಾಗುವುದು ಹಾಗಾಗಿ ರೈತರು ಬಿಲ್ ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.