ಬೆಂಗಳೂರು: ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸುವುದು ತಡವಾಗುತ್ತಿದ್ದು, ಇದಕ್ಕೆ ಖಾಸಗಿ ಲ್ಯಾಬ್ ಗಳು ಮತ್ತು ಖಾಸಗಿ ಆಸ್ಪತ್ರೆಗಳೇ ಕಾರಣವೆಂದು ಬಿಬಿಎಂಪಿ ಆರೋಪ ಮಾಡಿದೆ.
ಖಾಸಗಿ ಲ್ಯಾಬ್ ಗಳಲ್ಲಿ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಕೋವಿಡ್ ಟೆಸ್ಟ್ ವರದಿ ಬಂದ ತಕ್ಷಣ ಟೆಸ್ಟ್ ವರದಿಯನ್ನು ಐಸಿಎಂಆರ್ ವೆಬ್ಸೈಟ್ ನಲ್ಲಿ ನೋಂದಾಯಿಸಬೇಕಿದೆ. ಆದರೆ, ವೆಬ್ಸೈಟ್ ಗೆ ಹಾಕಬೇಕಾದ ಲ್ಯಾಬ್, ಖಾಸಗಿ ಆಸ್ಪತ್ರೆಗಳು ಅದಕ್ಕಿಂತ ಮೊದಲೇ ರೋಗಿಗೆ ವರದಿ ತಿಳಿಸುತ್ತಿವೆ.
ಬಳಿಕ ಎರಡು, ಮೂರು ದಿನಕ್ಕೆ ವೆಬ್ಸೈಟ್ ಗೆ ಅಪ್ಲೋಡ್ ಮಾಡುತ್ತಾರೆ. ಹೀಗಾಗಿ ಸೋಂಕಿತರನ್ನು ಶಿಫ್ಟ್ ಮಾಡಲು ತಡವಾಗುತ್ತಿದೆ. ಐಸಿಎಂಆರ್ ವೆಬ್ ಸೈಟ್ ಗೆ ಅಪ್ಡೇಟ್ ಮಾಡಿದರೆ ಮಾಹಿತಿ ಗೊತ್ತಾಗುತ್ತದೆ. ಬಿಬಿಎಂಪಿಗೆ ಕೊರೋನಾ ಸೋಂಕಿತ ವ್ಯಕ್ತಿಯ ಮಾಹಿತಿ ಸಿಗುತ್ತದೆ. ಆಗ ನಾವು ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುತ್ತೇವೆ. ಆದರೆ ಮಾಹಿತಿಯನ್ನು ತಡವಾಗಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರ ಶಿಫ್ಟ್ ಮಾಡುವುದು ತಡವಾಗುತ್ತಿದೆ.
ಹೀಗೆಂದು ಖಾಸಗಿ ಆಸ್ಪತ್ರೆ ಮತ್ತು ಲ್ಯಾಬ್ ಗಳ ವಿರುದ್ಧ ಬಿಬಿಎಂಪಿ ಗಂಭೀರ ಆರೋಪ ಮಾಡಿದೆ. ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಸೋಂಕಿತರಿಗೆ ಮಾಹಿತಿ ಬಂದ ತಕ್ಷಣ ಮಾಹಿತಿಯನ್ನು ಬಿಬಿಎಂಪಿಗೆ ತಿಳಿಸಬೇಕು. 108 ಕ್ಕೆ ಕರೆ ಮಾಡಿ ಮಾಹಿತಿ ತಿಳಿಸಲು ಬಿಬಿಎಂಪಿ ಮನವಿ ಮಾಡಿದೆ.