ದಾವಣಗೆರೆ: ಪೊಲೀಸ್ ಇಲಾಖೆಯಲ್ಲಿ 5000 ಪೊಲೀಸ್ ಕಾನ್ಸ್ ಟೇಬಲ್ ಮತ್ತು 500 ಪಿಎಸ್‍ಐ ಗಳನ್ನು ನೇಮಕಾತಿ ಮಾಡಲು ಅಧಿಸೂಚಿಸಲಾಗಿದೆ ಎಂದು ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಮೂರು ವರ್ಷಗಳಿಗೆ ಅಗತ್ಯವಾದ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಜನಸ್ನೇಹಿ ಮತ್ತು ಅಪರಾಧ ವಿರೋಧಿಯಾಗಿ ಕೆಲಸ ಮಾಡಬೇಕೆಂಬುದೇ ಪೊಲೀಸ್ ಇಲಾಖೆಯ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ ಎಂದು ತಿಳಿಸಿದ್ದಾರೆ.
ಲಾಕ್‍ಡೌನ್ ತೆರವುಗೊಂಡ ಬಳಿಕ ಅಪರಾಧ ಪ್ರಕರಣ ಹೆಚ್ಚುವ ಸಂಭವವಿದ್ದು, ನಿಯಂತ್ರಣ ಕ್ರಮಗಳ ಬಗ್ಗೆ ಸೂಚನೆ ನೀಡಲಾಗಿದೆ. ಜೊತೆಗೆ ಅಪರಾಧ ತಡೆಗೆ ವಿಶೇಷ ಆಂದೋಲನ ಮಾಡುವಂತೆ ಸೂಚಿಸಲಾಗಿದೆ. ಅಪರಾಧ ಪ್ರಕರಣಗಳಿಗೆ ಎಡೆ ಮಾಡಿಕೊಡುವ ಮಟ್ಕಾ, ಕ್ಲಬ್ ಇತರೆ ಆರ್ಥಿಕ ಅಪರಾಧಗಳಾದ ಬ್ಯಾಂಕ್ ಖಾತೆಯಿಂದ ಹಣ ದೋಚುವುದು, ಕ್ರೆಡಿಟ್ ಕಾರ್ಡ್ ವಂಚನೆ, ಎಟಿಎಂ ಮೂಲಕ ಹಣ ದೋಚುವುದು ಹೀಗೆ ವಿವಿಧ ಸೈಬರ್ ಕ್ರೈಂಗಳ ಕುರಿತು ನಿಗಾ ವಹಿಸಲು ಸೂಚನೆ ನೀಡಲಾಗಿದ್ದು, ಇಲಾಖೆಯು ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.