ವಿಜಯಪುರ: ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಬಹಳ ದಿನ ಇರಲ್ಲ, ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತೆ ಸಿಎಂ ಬಗ್ಗೆ ಹೇಳಿಕೆ ನೀಡಿದ್ದಾರೆ.
ಶಿಸ್ತು ಕ್ರಮದ ಮಾತಿಗೆ ವ್ಯಂಗ್ಯವಾಡಿದ ಅವರು, ಯಾರು ಏನೇನೋ ಬರಿತಾರೋ ಬರೆದುಕೊಳ್ಳಲಿ ಎಂದು ಸಿಎಂ ಬಗ್ಗೆ ಮತ್ತೆ ಗುಟುರು ಹಾಕಿದ್ದು, ಯಡಿಯೂರಪ್ಪ ಮೂರು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಅಂತ ನಾನು ಹೇಳಿಲ್ಲ, ನಾನು ಯಾವ ವಿವಾದಾತ್ಮಕ ಹೇಳಿಕೆಯನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.
ನನ್ನ ಕ್ಷೇತ್ರಕ್ಕೆ ಬರಬೇಕಾದ ಅನುದಾನವನ್ನು ಸಿಎಂ ತಡೆದಿದ್ದರು. ಅನುದಾನ ತಡೆಹಿಡಿದಿರುವುದನ್ನು ನಾನು ಪ್ರಶ್ನಿಸಿದ್ದೆ ಅಷ್ಟೇ. ನಾನು ಸಿಎಂ ಸ್ಥಾನದ ಆಕಾಂಕ್ಷಿ ಅಲ್ಲವೇ ಅಲ್ಲ. ಯಾರ ಹಣೆಯಲ್ಲಿ ಏನು ಬರೆದಿದೆಯೋ ಯಾರಿಗೆ ಗೊತ್ತು? ಮೋದಿ ಮನಸ್ಸಲ್ಲಿ ಏನು ಬರುತ್ತೋ ಹಾಗೆ ಆಗುತ್ತೆ ಎಂದು ವಿಜಯಪುರದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆನ್ನಲಾಗಿದೆ.