ವಿಜಯಪುರ: ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಬಹಳ ದಿನ ಇರುವುದಿಲ್ಲ. ಕೇಂದ್ರ ಸರ್ಕಾರದವರಿಗೂ, ಪಕ್ಷದ ಹೈಕಮಾಂಡ್ ನಾಯಕರಿಗೂ ಯಡಿಯೂರಪ್ಪ ಬಗ್ಗೆ ಸಾಕಾಗಿ ಹೋಗಿದೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಬಹಳ ದಿನ ಇರುವುದಿಲ್ಲ. ಕೇಂದ್ರ ಸರ್ಕಾರದವರು ಸಾಕಾಗಿ ಹೋಗಿದ್ದಾರೆ. ಮುಂದಿನ ಬಾರಿ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಯಡಿಯೂರಪ್ಪ ಶಿವಮೊಗ್ಗಕ್ಕೆ ಮಾತ್ರ ಮುಖ್ಯಮಂತ್ರಿಯೇ? ಕರ್ನಾಟಕಕ್ಕೆ ಮುಖ್ಯಮಂತ್ರಿಯೇ? ಎಂದು ಶಾಸಕ ಉಮೇಶ್ ಕತ್ತಿ ಇತ್ತೀಚೆಗೆ ಹೇಳಿದ್ದರು. ಉತ್ತರ ಕರ್ನಾಟಕದಿಂದ 100 ಶಾಸಕರನ್ನು ಗೆಲ್ಲಿಸಿ ಕಳಿಸುತ್ತೇವೆ. ಉಳಿದ ಭಾಗದಲ್ಲಿ ಬಿಜೆಪಿಯ 15 ರಿಂದ 20 ಶಾಸಕರು ಗೆಲ್ಲುತ್ತಾರೆ. ಅವರಲ್ಲಿ ಒಬ್ಬರು ಸಿಎಂ ಆಗುತ್ತಾರೆ. ಉತ್ತರ ಕರ್ನಾಟಕದವರು ಹೆಚ್ಚಿನ ಶಾಸಕರನ್ನು ಗೆಲ್ಲಿಸಿ ಕಳಿಸಿದರೂ ಅಲ್ಲಿನವರೇ ಸಿಎಂ ಆಗ್ತಾರೆ. ಎಂದು ಯತ್ನಾಳ್ ಹೇಳಿದ್ದಾರೆ.
ಉತ್ತರ ಕರ್ನಾಟಕದವರಿಂದಲೇ ಬಿಜೆಪಿಯವರು ಸಿಎಂ ಆಗ್ತಾರೆ. ಮಂಡ್ಯದಲ್ಲಿ ಯಾರಾದ್ರೂ ಬಿಜೆಪಿಗೆ ವೋಟ್ ಹಾಕ್ತಾರ? ಮುಂದಿನ ಬಾರಿ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿಯಾಗಲಿದ್ದಾರೆ. ನನ್ನ ಕ್ಷೇತ್ರದ ಅನುದಾನ ಕಡಿತ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಮತ್ತು ನನ್ನ ನಡುವೆ ಜಗಳ ಶುರುವಾಗಿದೆ. ಅವರು ಸಿಎಂ ಆಗಿ ಬಹಳ ದಿನ ಇರಲ್ಲ ಎಂದು ಯತ್ನಾಳ್ ಹೇಳಿದ್ದು ಬಿಜೆಪಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ ಎಂದು ಹೇಳಲಾಗಿದೆ.