ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜುಲೈ 16 ರಿಂದ ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಜುಲೈ 16 ರಂದು ರಾತ್ರಿ 8 ಗಂಟೆಯಿಂದ ಜುಲೈ 23 ರಂದು ಬೆಳಗ್ಗೆ 5 ಗಂಟೆಯವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಲಾಕ್ ಡೌನ್ ಜಾರಿ ಮಾಡಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ಹೊರಡಿಸಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ.
ಹಣ್ಣು-ತರಕಾರಿ, ಮಾಂಸದ ಅಂಗಡಿಗಳು ತೆರೆದಿರುತ್ತವೆ. ಹೆದ್ದಾರಿಗಳಲ್ಲಿ ಸರಕು ಸಾಗಾಣಿಕೆ ವಾಹನಗಳಿಗೆ ಮಾತ್ರ ಅವಕಾಶವಿದ್ದು, ಅಗತ್ಯ ಮತ್ತು ತುರ್ತು ಸೇವೆಗಳು ಲಭ್ಯವಿರುತ್ತವೆ. ವೈನ್ ಶಾಪ್, ಬಾರ್, ಮಾಲ್, ವಾಣಿಜ್ಯ ಸಂಸ್ಥೆಗಳು ಬಂದ್ ಆಗಲಿವೆ. ಕಂಟೇನ್ಮೆಂಟ್ ವಲಯದಲ್ಲಿ ಸಂಪೂರ್ಣ ಬಂದ್ ಇರಲಿದೆ. ಸಾರಿಗೆ ಸಂಚಾರ ಕೂಡ ಸಂಪೂರ್ಣ ಸ್ಥಗಿತವಾಗಲಿದೆ.