ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಜೀವನ ನಿರ್ವಹಣೆಗಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ವಿಶೇಷ ಆರ್ಥಿಕ ಪ್ಯಾಕೇಜ್ ಬಗ್ಗೆ ರಾಜ್ಯ ರೈತ ಸಂಘ ಅಸಮಾಧಾನ ಹೊರಹಾಕಿದೆ. ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಈ ಆರ್ಥಿಕ ಪ್ಯಾಕೇಜ್ ಮೂಲಕ ಸಿಎಂ ಯಡಿಯೂರಪ್ಪ ಬಡವರ ಕಣ್ಣೊರೆಸುವ ತಂತ್ರ ಮಾಡಿದ್ದಾರೆ ಎಂದು ಹೇಳಿದ್ರು.
ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಯಾವುದೇ ಅಂಶ ಈ ಪ್ಯಾಕೇಜ್ನಲ್ಲಿಲ್ಲ. ಯಡಿಯೂರಪ್ಪ ಘೋಷಣೆ ಮಾಡಿದ ಈ ಪ್ಯಾಕೇಜ್ನಿಂದ ಯಾವುದೇ ವರ್ಗಕ್ಕೆ ಲಾಭವಿಲ್ಲ. ಹೂ ಹಾಗೂ ತರಕಾರಿ ಬೆಳೆಗಾರರಿಗೆ 10 ಸಾವಿರ ಬದಲು 25 ಸಾವಿರ ರೂಪಾಯಿ ಘೋಷಣೆ ಮಾಡಬೇಕಿತ್ತು. ಸಾಲ ಮರುಪಾವತಿ ಅವಧಿಯನ್ನ ಮುಂದೂಡುವ ಬದಲು ಒಂದು ವರ್ಷಗಳ ಸಂಪೂರ್ಣ ಬಡ್ಡಿ ಮನ್ನಾ ಮಾಡಬಹುದಿತ್ತು. ಹೊಸದಾಗಿ ಬಡ್ಡಿ ರಹಿತ ಸಾಲವನ್ನ ನೀಡಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ ಇದ್ಯಾವುದನ್ನೂ ಮಾಡದೇ ಸರ್ಕಾರ ರೈತರ ಹಾಗೂ ದುಡಿಯುವ ವರ್ಗದ ಕಣ್ಣೊರೆಸುವ ತಂತ್ರ ಮಾಡಿದೆ ಎಂದು ಹೇಳಿದ್ರು.
ಇನ್ನು ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರ್ಘಟನೆ ಸಂಬಂಧ ಮಾತನಾಡಿದ ನಾಗೇಂದ್ರ, ಇದು ಸರ್ಕಾರ ಮಾಡಿದ ಕೊಲೆಯಾಗಿದೆ. ಅವರಿಗೆ ಯಾವುದೇ ಪರಿಹಾರವನ್ನೂ ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದ್ರು.