
ಶಿವಮೊಗ್ಗ: 1.5 ಲಕ್ಷ ರೂ.ಗೆ 15 ದಿನದ ಗಂಡು ಮಗುವನ್ನು ಮಾರಾಟ ಮಾಡಲು ಯತ್ನಿಸಿದ್ದ ವೇಳೆಯಲ್ಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಶೈಲಾ, ಸುಮಾ, ತುಳಸಿ ಹಾಗೂ ಷಣ್ಮುಖ ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ. ಶಿವಮೊಗ್ಗದ ಟಿಪ್ಪು ನಗರದಲ್ಲಿರುವ ನಿವಾಸದ ಮೇಲೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. 15 ದಿನಗಳ ಹಿಂದೆ ಜನಿಸಿದ ಮಗುವನ್ನು ಹಣ ಪಡೆದು ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿತ್ತು. ಈ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ.
ಆರೋಪಿ ಸುಮಾ ಸಂಬಂಧಿಕರಿಗೆ ಸೇರಿದ ಮಗುವನ್ನು ಮಾರಾಟ ಮಾಡಲಾಗಿದೆ. ಬಡತನದ ಕಾರಣದಿಂದ ಸಾಕಲಾಗದೆ ಮಗು ಮಾರಾಟಕ್ಕೆ ಮುಂದಾಗಿರುವುದಾಗಿ ಪೋಷಕರು ಹೇಳಿದ್ದಾರೆ ಎನ್ನಲಾಗಿದೆ. ಇವರು ಇನ್ನೂ ಹಲವು ಮಕ್ಕಳನ್ನು ಮಾರಾಟ ಮಾಡಿರುವ ಶಂಕೆ ಇದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆನ್ನಲಾಗಿದೆ.