ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಿಸಿದ್ದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹುಣಸೂರು ಪಟ್ಟಣದ 24 ವರ್ಷದ ಮಹಿಳೆ ಚಾಮರಾಜನಗರ ಜಿಲ್ಲಾಸ್ಪತ್ರೆಯಿಂದ ಪೋಷಕರ ಕಣ್ಣುತಪ್ಪಿಸಿ 5 ದಿನಗಳ ಗಂಡುಮಗುವನ್ನು ಅಪಹರಿಸಿದ್ದರು. 5 ತಿಂಗಳ ಹಿಂದೆ ಮಹಿಳೆಗೆ ಗರ್ಭಪಾತವಾಗಿದ್ದು ಆಕೆಯ ಪತಿ ಮಗು ಸಮೇತ ಮನೆಗೆ ಬರಬೇಕು ಇಲ್ಲದಿದ್ದರೆ ಬರುವುದು ಬೇಡ ಎಂದು ತಾಕೀತು ಮಾಡಿದ್ದಾನೆ.
20 ದಿನಗಳ ಹಿಂದೆ ಚಾಮರಾಜನಗರದ ಅಜ್ಜಿ ಮನೆಗೆ ಬಂದಿದ್ದ ಮಹಿಳೆ ಮಗುವಿನೊಂದಿಗೆ ಮನೆಗೆ ಹೋಗಬೇಕೆಂದು ಮಗುವನ್ನೇ ಆಪಹರಿಸಿದ್ದಾಳೆ. ಜಿಲ್ಲಾಸ್ಪತ್ರೆಯಲ್ಲಿ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ವ್ಯಾಸರಾಜಪುರ ಗ್ರಾಮದ ಮುತ್ತುರಾಜಮ್ಮ ಅವರು ಜೂನ್ 13ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಶಿಶುವಿಗೆ ಭೇದಿ ಆದ ಕಾರಣ ಅಜ್ಜಿ ಮಗುವನ್ನು ವೈದ್ಯರಿಗೆ ತೋರಿಸಲು ಕರೆದುಕೊಂಡು ಹೋಗಿದ್ದು ಹೊರರೋಗಿ ವಿಭಾಗದ ಬಳಿ ಅಜ್ಜಿಯನ್ನು ಯಾಮಾರಿಸಿ ಮಹಿಳೆ ಮಗುವನ್ನು ಅಪಹರಿಸಿಕೊಂಡು ಆಸ್ಪತ್ರೆಯಿಂದ ಆಟೋದಲ್ಲಿ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬಸ್ ನಲ್ಲಿ ಹುಣಸೂರಿಗೆ ಹೋಗಿದ್ದಾಳೆ. ಪೋಷಕರು ಮಗುವ ಅಪಹರಣವಾದ ಮಾಹಿತಿ ನೀಡಿದ ಕೂಡಲೇ ಆಸ್ಪತ್ರೆ ಸಿಬ್ಬಂದಿ ಹಾಗೂ ಪೊಲೀಸರು ಆಟೋ ಚಾಲಕರಿಂದ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ್ದಾರೆ. ಹುಣಸೂರು ಬಸ್ ನಿಲ್ದಾಣದಲ್ಲಿ ಮಗುವಿನೊಂದಿಗೆ ಬಸ್ ಇಳಿದ ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ಪತಿ ಮಗು ಬೇಕೆಂದು ಹೇಳಿದ್ದರಿಂದ ಅಪಹರಣ ಮಾಡಿದ್ದಾಗಿ ಮಹಿಳೆ ತಿಳಿಸಿದ್ದಾಳೆ ಎನ್ನಲಾಗಿದೆ.