ಬೆಂಗಳೂರು: ಆರೋಗ್ಯ ಸಚಿವ ಬಿ. ಶ್ರೀರಾಮುಲು ಅಸಮಾಧಾನ ಸ್ಪೋಟಗೊಂಡಿದೆ. ಸಚಿವ ಸಂಪುಟ ಸಭೆಯಲ್ಲಿ ಅವರು ಸಿಎಂ ಎದುರಲ್ಲೇ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಕೋವಿಡ್ ರಾಜ್ಯ ಟಾಸ್ಕ್ ಫೋರ್ಸ್ ಅಧ್ಯಕ್ಷರಾದರೂ ಎಲ್ಲ ವಿಚಾರದಲ್ಲಿಯೂ ನನ್ನನ್ನು ಓವರ್ ಟೇಕ್ ಮಾಡಲಾಗುತ್ತಿದೆ ಎಂದು ಹಲವು ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲ ಸಚಿವರು, ಅಧಿಕಾರಿಗಳ ಹಸ್ತಕ್ಷೇಪ ಜಾಸ್ತಿಯಾಗಿದೆ ಎಂದು ಸಿಎಂ ಎದುರಲ್ಲೇ ಸಚಿವ ರಾಮುಲು ಬೇಸರ ತೋರಿದ್ದಾರೆ ಎಂದು ಹೇಳಲಾಗಿದೆ.
ರಾಜ್ಯ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಸ್ಥಾನವೇ ಬೇಡವೆಂದು ಹೇಳಿದ್ದು, ಸಮಿತಿಯಲ್ಲಿ ಇರುವ ಇತರೆ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಿತಿಯ ಸಭೆಯಲ್ಲಿ ನನ್ನನ್ನು ಓವರ್ ಟೇಕ್ ಮಾಡಲಾಗುತ್ತಿದೆ. ನನ್ನ ಮಾತಿಗೆ ಯಾರೂ ಗೌರವ ನೀಡುತ್ತಿಲ್ಲ. ಆರೋಗ್ಯ ಇಲಾಖೆ ನನಗೇನು ಹೊಸದಲ್ಲ, ಅನುಭವ ಇದೆ. ಆದರೆ ಈ ಬಾರಿ ಕೆಲ ಸಚಿವರು, ಅಧಿಕಾರಿಗಳ ಹಸ್ತಕ್ಷೇಪ ನನ್ನ ಇಲಾಖೆಯಲ್ಲಿ ಹೆಚ್ಚಾಗಿದೆ ಎಂದು ದೂರಿದ್ದಾರೆ ಎನ್ನಲಾಗಿದೆ.
ಇತರೆ ಸಚಿವರ ಹಸ್ತಕ್ಷೇಪ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇರುತ್ತಿಲ್ಲ. ಅದರ ಬದಲಿಗೆ ರಾಜ್ಯ ಪ್ರವಾಸ ಕೈಗೊಂಡಿದ್ದೇನೆ ಎಂದು ಸಚಿವ ಸಂಪುಟ ಸಭೆಯಲ್ಲಿ ಶ್ರೀರಾಮುಲು ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಅಲ್ಲದೆ ಇಂದು ಕಾಂಗ್ರೆಸ್ ನಾಯಕರು ಮಾಡಿದ ಆರೋಪಗಳಿಗೆ ಪ್ರತ್ಯುತ್ತರ ನೀಡಲು ಸಚಿವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದ ಶ್ರೀರಾಮುಲು ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ. ಸಿದ್ದರಾಮಯ್ಯ ಆರೋಪಗಳಿಗೆ ದಾಖಲೆ ಸಹಿತ ಸಚಿವರು ಉತ್ತರ ನೀಡುತ್ತಿದ್ದರೂ ಶ್ರೀರಾಮುಲು ಮೌನಕ್ಕೆ ಶರಣಾಗಿದ್ದಾರೆ.