ಕೊಪ್ಪಳ: ಸಿದ್ದರಾಮಯ್ಯ ಮೊದಲು ಕಾಂಗ್ರೆಸ್ ಪಕ್ಷದೊಳಗಿನ ಒಳಜಗಳ ಸರಿಪಡಿಸಿಕೊಳ್ಳಲಿ. ನಂತರ ಬಿಜೆಪಿ ಬಗ್ಗೆ ಮಾತನಾಡಲಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿರುಗೇಟು ನೀಡಿದ್ದಾರೆ.
ಬಿಜೆಪಿಗೆ ಹೋದ 17 ಶಾಸಕರ ಕುರಿತು ಸಿದ್ಧರಾಮಯ್ಯ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿ.ಸಿ. ಪಾಟೀಲ್, ಸಿದ್ದರಾಮಯ್ಯ ಅದ್ಯಾಕೆ ಬಿಜೆಪಿ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳುತ್ತಾರೆಯೋ ಗೊತ್ತಾಗುತ್ತಿಲ್ಲ. ಮೊದಲು ಅವರ ಪಕ್ಷವನ್ನು ಸರಿಯಾಗಿ ನೋಡಿಕೊಳ್ಳಲಿ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯಗೆ ಡಿ.ಕೆ.ಶಿವಕುಮಾರ್ ಅವರನ್ನು ಸಂಭಾಳಿಸಿಕೊಂಡು ಹೋದರೆ ಸಾಕಾಗಿದೆ. ಡಿ.ಕೆ. ಶಿವಕುಮಾರ್ ಸಿದ್ದರಾಮಯ್ಯರನ್ನು ರಾಜಕೀಯವಾಗಿ ಮುಗಿಸಬೇಕು ಎಂದಿದ್ದರೆ ಸಿದ್ದರಾಮಯ್ಯ ಡಿಕೆಶಿಯನ್ನು ರಾಜಕೀಯವಾಗಿ ಮುಗಿಸಬೇಕೆಂದಿದ್ದಾರೆ. ಈ ನಡುವೆ ಇಬ್ಬರು ಕೂತು ಭಾಷಣ ಮಾಡುತ್ತಾರೆ. ಕಾಂಗ್ರೆಸ್ ತಟ್ಟೆಯಲ್ಲಿಯೇ ಕತ್ತೆ ಬಿದ್ದಿದೆ. ಅದನ್ನು ನೋಡುವುದು ಬಿಟ್ಟು ಇನ್ನೊಬ್ಬರ ತಟ್ಟೆಯಲ್ಲಿನ ನೊಣ ಓಡಿಸಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಈ ನಡುವೆ ಬಿಜೆಪಿ ಬಗ್ಗೆ ಬಹಳ ಆಸಕ್ತಿ ಬಂದಂತಿದೆ. ಸಿದ್ದರಾಮಯ್ಯ ಬಿಜೆಪಿಗೆ ಬಂದರೆ ಅವರನ್ನು ಹೃದಯಪೂರ್ವಕ ಸ್ವಾಗತಿಸುತ್ತೇನೆ. ಇನ್ನೂ ಎರಡೂವರೆ ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಪಕ್ಷದ ವರಿಷ್ಠರು ಕ್ರಮಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ