ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
12 ಎಫ್ಐಆರ್ ಗಳು ದಾಖಲಾಗಿದ್ದು ಎರಡು ಪ್ರಕರಣಗಳನ್ನು ಸಿಸಿಬಿಗೆ ವಹಿಸಲಾಗಿದೆ ಎಂದು ಹೇಳಲಾಗಿದೆ. ಡಿಜೆ ಹಳ್ಳಿ ಠಾಣೆ ಇನ್ಸ್ ಪೆಕ್ಟರ್ ಕೇಶವಮೂರ್ತಿ ಘಟನೆ ಕುರಿತು ವಿವರ ನೀಡಿದ್ದು, ಪೊಲೀಸರನ್ನು ಬಿಡಬೇಡಿ, ಅವರನ್ನು ಮುಗಿಸಿಬಿಡಿ. ಒಬ್ಬರೂ ಪೊಲೀಸರನ್ನು ಉಳಿಸಬೇಡಿ ಎಂದು ದಾಳಿ ಮಾಡಿದವರು ಕೂಗಾಡುತ್ತಿದ್ದರು. 5 – 6 ಮಂದಿ ಆರೋಪಿತರು ಆಕ್ರೋಶಭರಿತ ಹೇಳಿಕೆಗಳಿಂದ ಮುನ್ನೂರಕ್ಕೂ ಹೆಚ್ಚು ಉದ್ರಿಕ್ತರಿಗೆ ಪ್ರಚೋದನೆ ನೀಡುತ್ತಿದ್ದರು ಎಂದು ಹೇಳಲಾಗಿದೆ.
ಅಪ್ನಾನ್, ಮುಜಾಮಿಲ್ ಪಾಶಾ, ಸೈಯದ್ ಮಸೂದ್, ಅಲ್ಲಾಬಕಷ್ ಮೊದಲಾದವರು ಪ್ರಚೋದನೆ ನೀಡುತ್ತಿದ್ದರು. ಶಸ್ತ್ರಾಸ್ತ್ರ ಸಜ್ಜಿತರಾಗಿ ಬಂದಿದ್ದ ಉದ್ರಿಕ್ತರು ಪೊಲೀಸರು, ಪೊಲೀಸ್ ಠಾಣೆ ಮೇಲೆ ದಾಳಿ ಮಾಡಲು ಸಜ್ಜಾಗಿದ್ದು, ಮಚ್ಚು-ಲಾಂಗು, ದೊಣ್ಣೆ, ರಾಡ್, ಕಲ್ಲು, ಇಟ್ಟಿಗೆಗಳನ್ನು ಹಿಡಿದು ಠಾಣೆಯ ಮೇಲೆ ಕಿಟಕಿ ಬಾಗಿಲು ಜಖಂಗೊಳಿಸಿ ವಾಹನಗಳಿಗೆ ಬೆಂಕಿ ಹಾಕಿದ್ದಾರೆ. ಠಾಣೆಯಿಂದ ಹೊರನಡೆಯುವಂತೆ ಸೂಚನೆ ನೀಡಿದರೂ ಕೇಳದ ಉದ್ರಿಕ್ತರು ದಾಳಿ ನಡೆಸಿದ್ದು, ಪೊಲೀಸ್ ಸಿಬ್ಬಂದಿ ಗಾಯಗೊಂಡರು ಎಂದು ಹೇಳಲಾಗಿದೆ.