ಶಿವಮೊಗ್ಗ: ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ನಿಧಿ ಯೋಜನೆಯ ವಿಶೇಷ ಕಿರು ಸಾಲ ಸೌಲಭ್ಯ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಜುಲೈ 1, 2020 ರಿಂದ ಮಾರ್ಚ್ 31, 2022 ರವರೆಗಿನ ಈ ಯೋಜನೆಯು ಬೀದಿ ಬದಿ ವ್ಯಾಪಾರಸ್ಥರಿಗೆ ಬ್ಯಾಂಕ್‍ಗಳ ಮೂಲಕ 10 ಸಾವಿರ ರೂ.ಗಳ ವರೆಗೆ ಸಾಲ ಸೌಲಭ್ಯ ನೀಡುವುದು, ನಿಯಮಿತವಾಗಿ ಸಾಲ ಮರುಪಾವತಿಸಿದವರಿಗೆ ಶೇ. 7 ರಷ್ಟು ಬಡ್ಡಿ ಸಹಾಯಧನ ನೀಡುವುದು, ಡಿಜಿಟಲ್ ವಹಿವಾಟಿಗೆ ಉತ್ತೇಜನ ಹಾಗೂ ಬಹುಮಾನ ನೀಡುವ ಉದ್ದೇಶ ಹೊಂದಿದೆ.
ಸಮೀಕ್ಷೆಯಲ್ಲಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಸ್ಥರು ನಿಗದಿತ ನಮೂನೆ ಅರ್ಜಿಯನ್ನು ಶಿವಮೊಗ್ಗ ಮಹಾನಗರ ಪಾಲಿಕೆ ನಲ್ಮ್ ವಿಭಾಗದಿಂದ ಪಡೆದು, ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್‍ಪಾಸ್ ಬುಕ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಬೀದಿ ವ್ಯಾಪಾರಸ್ಥರ ಗುರುತಿನ ಚೀಟಿ ಈ ಎಲ್ಲಾ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ ಜುಲೈ 20ರೊಳಗಾಗಿ ಸಲ್ಲಿಸುವಂತೆ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮಹಾನಗರ ಪಾಲಿಕೆಯ ನಲ್ಮ್ ವಿಭಾಗವನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.