ಕೋವಿಡ್-19 ಕ್ವಾರಂಟೈನ್ ಸೌಲಭ್ಯಗಳಲ್ಲಿ ದಾಖಲಾಗಿರುವ ಸೋಂಕು ಪೀಡಿತರ ಮೂಡ್ ಲಿಫ್ಟ್ ಮಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಳ್ಳಾರಿಯ ಕ್ವಾರಂಟೈನ್ ಕೇಂದ್ರವೊಂದರಲ್ಲಿ ದಾಖಲಾಗಿರುವ ರೋಗ ಲಕ್ಷಣವಿಲ್ಲದ ಮಹಿಳಾ ಸೋಂಕಿತರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಅಲ್ಲಿನ ರೊಟೀನ್ ಬೋರ್ ಎನಿಸತೊಡಗಿದೆ. ಈ ಕಾರಣ, ಏಕಾತನತೆಯನ್ನು ಮುರಿಯಲು, ಸಾಮೂಹಿಕವಾಗಿ ಡ್ಯಾನ್ಸ್ ಮಾಡಲು ಮುಂದಾಗಿದ್ದಾರೆ.
ಬಳ್ಳಾರಿಯ ಸರ್ಕಾರೀ ದಂತ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿರುವ ಇವರು, ಉಪೇಂದ್ರ ಚಲನಚಿತ್ರದ ’ಮಸ್ತು ಮಸ್ತು ಹುಡುಗಿ ಬಂದ್ಲು’ ಹಾಡಿಗೆ ಸ್ಟೆಪ್ ಹಾಕುತ್ತಾ ಮೋಜಿನಲ್ಲಿ ಭಾಗಿಯಾಗುವ ಮೂಲಕ ನಿರ್ಲಿಪ್ತತತೆಯಿಂದ ಹೊರ ಬರುವ ಯತ್ನ ಮಾಡಿದ್ದಾರೆ.
ಇದೇ ವೇಳೆ, ಹೀಗೆ ಎಚ್ಚರಿಕೆಯನ್ನು ಗಾಳಿಗೆ ತಳ್ಳಿ, ಎಲ್ಲರೂ ಒಂದೆಡೆ ಸೇರಿಕೊಂಡು ಮೋಜು ಮಾಡಿದರೆ, ಇಂದು ರೋಗ ಲಕ್ಷಣಗಳಿಲ್ಲದವರು ನಾಳೆ ಸೀರಿಯಸ್ಸಾಗಿ ಸೋಂಕಿತರಾಗುವ ಸಾಧ್ಯತೆಗಳು ಬರುವುದಿಲ್ಲವೇ? ಎಂದು ಪ್ರಶ್ನೆ ಮಾಡಿರುವ ನೆಟ್ಟಿಗರನೇಕರು, ಅವರನ್ನು ಅವರವರ ಮನೆಗಳಿಗೆ ಸುರಕ್ಷಿತವಾಗಿ ಕಳುಹಿಸುವುದನ್ನು ಖಾತ್ರಿ ಮಾಡುವುದು ಮೊದಲ ಆದ್ಯತೆಯಾಗಬೇಕು ಎಂದಿದ್ದಾರೆ.