ಆಷಾಢ ಮಾಸ ಆರಂಭವಾಗಿದೆ. ಆಷಾಢ ಮುಗಿದ ಬಳಿಕ ಆರಂಭವಾಗುವ ಶ್ರಾವಣ ಮಾಸದಿಂದ ಹಿಂದೂಗಳ ಹಬ್ಬದ ಸಾಲು ಆರಂಭವಾಗುತ್ತದೆ.
ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಅಲ್ಲದೇ ನವ ವಿವಾಹಿತೆಯರು ಆಷಾಢ ಮಾಸ ಮುಗಿಯುವವರೆಗೂ ತವರು ಮನೆಗೆ ತೆರಳುತ್ತಾರೆ.
ಅತ್ತೆ- ಸೊಸೆ ಒಂದೇ ಹೊಸಿಲನ್ನು ಈ ಮಾಸದಲ್ಲಿ ದಾಟಬಾರದೆಂಬ ಕಾರಣಕ್ಕೆ ಈ ಪದ್ದತಿ ಮಾಡಲಾಗಿದೆಯಾದರೂ ಹೊಸದಾಗಿ ವಿವಾಹವಾದಾಕೆ ಈ ನೆಪದಲ್ಲಿಯಾದರೂ ಒಂದು ತಿಂಗಳ ಕಾಲ ತವರು ಮನೆಯಲ್ಲಿರುವ ಅವಕಾಶ ದೊರೆಯುತ್ತದೆ. ಅಲ್ಲದೇ ಆಷಾಢ ಮಾಸದ ಅಮಾವಾಸ್ಯೆಯಂದು ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪ್ರಾಪ್ತಿಗಾಗಿ ಭೀಮೇಶ್ವರ ವ್ರತವನ್ನು ಆಚರಿಸುತ್ತಾರೆ.
ಆಷಾಢ ಮಾಸದಲ್ಲಿ ಮಳೆ ಜೋರಾಗಿರುವ ಕಾರಣ ರೈತಾಪಿ ವರ್ಗಕ್ಕೆ ಹೊಲ- ಗದ್ದೆಗಳಲ್ಲಿ ಆಪಾರ ಕೆಲಸವಿರುತ್ತಿತ್ತು. ಅಲ್ಲದೇ ಮಳೆಯ ಕಾರಣ ಜನ ಹೊರ ಬರುವುದು ಕಷ್ಟವಾಗುತ್ತಿತ್ತು. ಹೀಗಾಗಿ ಯಾವುದೇ ವ್ಯವಹಾರ ಅಥವಾ ಶುಭ ಸಮಾರಂಭ ಮಾಡಲು ಕಾಲಾವಕಾಶ ಸಿಗದ ಕಾರಣ, ಆಷಾಢ ಮಾಸದಲ್ಲಿ ಇಂತಹ ಕಾರ್ಯಗಳಿಗೆ ತಿಲಾಂಜಲಿ ಇಡಲಾಯಿತು ಎನ್ನಲಾಗುತ್ತದೆ.