ಕೊಪ್ಪಳ: ಆಶಾ ಕಾರ್ಯಕರ್ತೆಯರಿಗೆ ಸಾಲ ನೀಡುವ ಸಲುವಾಗಿ ಸಹಕಾರ ಇಲಾಖೆ ವತಿಯಿಂದ ಸೊಸೈಟಿ ಮಾದರಿಯಲ್ಲಿ 50 ಸಾವಿರ ರೂಪಾಯಿವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಣೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಸಹಕಾರ ಇಲಾಖೆ ವತಿಯಿಂದ ಕೊರೋನಾ ವಾರಿಯರ್ಸ್ ಆಗಿರುವ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಹಕಾರ ಇಲಾಖೆ ವತಿಯಿಂದ 14.5 ಸಾವಿರ ಕೋಟಿ ರೂಪಾಯಿ ಸಾಲ ನೀಡುವ ಗುರಿಯನ್ನು ಸಹಕಾರ ಸಚಿವರಾದ ಸೋಮಶೇಖರ್ ಅವರು ಹಾಕಿಕೊಂಡಿದ್ದರು. ಇಲ್ಲಿವರೆಗೆ 4.79 ಸಾವಿರ ರೈತರಿಗೆ ಸಾಲ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಸಂಸದರಾದ ಸಂಗಣ್ಣ ಕರಡಿ ಮಾತನಾಡಿ, ಕೊರೋನಾ ವೈರಸ್ ಜಗತ್ತನ್ನೇ ತಲ್ಲಣಗೊಳಿಸಿದೆ. ಜನರಿಗೂ ಸಾಕಷ್ಟು ಸಮಸ್ಯೆಯಾಗಿದೆ. ಜಗತ್ತಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಅತ್ಯುತ್ತಮ ಕ್ರಮ ಕೈಗೊಂಡವರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಂಬರ್ 1 ಸ್ಥಾನದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಶಾಸಕರಾದ ಅಮರೇಗೌಡ ಪಾಟೀಲ್ ಭಯ್ಯಾಪುರ, ಹಾಲಪ್ಪ ಆಚಾರ್ ಮಾತನಾಡಿದರು. ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮಕ್ಕೆ ಚೆಕ್ ಹಸ್ತಾಂತರ ಮಾಡುವ ಮೂಲಕ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಚಾಲನೆ ನೀಡಿದರು. ಶಾಸಕರಾದ ರಾಘವೇಂದ್ರ ಹಿಟ್ನಾಳ್, ಬಸವರಾಜ್, ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಇತರರು ಇದ್ದರು.