ಬೆಂಗಳೂರು: ಕೆಲಸ ಕೊಡಿಸುವುದಾಗಿ ಯುವತಿಯರನ್ನು ವಿದೇಶಗಳಿಗೆ ಮಾನವ ಕಳ್ಳ ಸಾಗಾಣೆ ಮಾಡಿ ಡ್ಯಾನ್ಸ್ ಬಾರ್ ಗಳಲ್ಲಿ ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ವಾಸವಾಗಿರುವ ಕೊಪ್ಪಳ ಜಿಲ್ಲೆ ಅಳವಂಡಿ ಗ್ರಾಮದ ಬಸವರಾಜ್ ಕಳಸದ ಬಂಧಿತ ಆರೋಪಿ. 9 ಮಂದಿ ಯುವತಿಯರನ್ನು ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳಿಂದ ಯುಎಇ ಮೊದಲಾದ ದೇಶಗಳಿಗೆ ಮಾನವ ಕಳ್ಳ ಸಾಗಾಣಿಕೆ ಮಾಡಿ ಒತ್ತಾಯಪೂರ್ವಕವಾಗಿ ಡ್ಯಾನ್ಸ್ ಬಾರ್ ಗಳಲ್ಲಿ ಕೆಲಸ ಮಾಡಿಸುತ್ತಿದ್ದ ಈತನ ವಿರುದ್ಧ ಕೇಸ್ ದಾಖಲಾಗಿತ್ತು.
ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದೇಶಗಳಿಂದ ಯುವತಿಯರನ್ನು ರಕ್ಷಿಸಿ ಭಾರತಕ್ಕೆ ಕರೆತರಲಾಗಿದ್ದು ತನಿಖೆ ಮುಂದುವರಿಸಲಾಗಿದೆ. ಸಿಸಿಬಿ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಮಾರ್ಗದರ್ಶನದಲ್ಲಿ ಎಸಿಪಿ ಎಂ.ಆರ್. ಮುದವಿ, ಪೊಲೀಸ್ ಇನ್ಸ್ ಪೆಕ್ಟರ್ ಹಜರೇಶ್ ಕಿಲ್ಲೇದಾರ್ ಸಿಬ್ಬಂದಿಗಳಾದ ರಾಘವೇಂದ್ರ, ಮುಫೀಜ್ ಖಾನ್, ನಾಗರಾಜು, ಶ್ರೀನಿವಾಸ್, ರವಿಕುಮಾರ್, ಪರಶುರಾಮ್ ಅವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ.