ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಕರ್ನಾಟಕ ಟಿಪ್ಪು ಟೈಗರ್ ಅಲ್ಪತ್ ಟ್ರಸ್ಟ್ ಅಧ್ಯಕ್ಷ ವಾಜಿದ್ ಪಾಷಾ ಅವರನ್ನು ಬಂಧಿಸಲಾಗಿದೆ.
ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ವಾಜಿದ್ ಪಾಷಾ ಸಾಮಾಜಿಕ ಜಾಲತಾಣದಲ್ಲಿ ಕೆಲವು ದಿನಗಳ ಹಿಂದೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಾಪತ್ತೆಯಾಗಿರುವುದಾಗಿ ಪೋಸ್ಟ್ ಹಾಕಿದ್ದರು. ಪೋಸ್ಟ್ ಗೆ ಸಂಬಂಧಿಸಿದಂತೆ ಶಾಸಕರ ಬೆಂಬಲಿಗರು ದೂರು ನೀಡಿದ್ದು ಬಳಿಕ ಪೊಲೀಸರು ರಾಜಿ ಸಂಧಾನ ಮಾಡಿದ್ದರು ಎನ್ನಲಾಗಿದೆ.
ಗಲಭೆ ನಡೆದ ದಿನ ನವೀನ್ ವಿರುದ್ಧ ದೂರು ನೀಡಿದ್ದ ಗುಂಪಿನಲ್ಲಿ ವಾಜಿದ್ ಕೂಡ ಇದ್ದರು. ಎಫ್ಐಆರ್ ದಾಖಲು ಮಾಡಲು ಎರಡು ಗಂಟೆ ಸಮಯ ಬೇಕೇ? ಪೊಲೀಸರ ವಿರುದ್ಧ ಕೂಗಾಟ ನಡೆಸಿದ್ದರು. ಎಫ್ಐಆರ್ ಇಲ್ಲದೆ ಆರೋಪಿ ನವೀನ್ ನನ್ನು ಬಂಧಿಸುವುದು ಕಾನೂನು ಬಾಹಿರವಾಗುತ್ತದೆ ಎಂದು ಪೊಲೀಸರು ಹೇಳಿದಾಗ ನಮ್ಮನ್ನಾಗಿದ್ದರೆ ಕೇವಲ ಐದು ಸೆಕೆಂಡ್ ನಲ್ಲಿ ಅರೆಸ್ಟ್ ಮಾಡುತ್ತಾರೆ ಎಂದು ವಾಜಿದ್ ಕೂಗಾಟ ನಡೆಸಿದ್ದ ಎನ್ನಲಾಗಿದೆ. ವಾಜಿದ್ ಉದ್ರೇಕದ ಮಾತುಗಳಿಂದ ಯುವಕರು ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.