ಬೆಂಗಳೂರು: ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು, ಡಿಜೆ ಹಳ್ಳಿ ಠಾಣೆ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿ ಬಿಬಿಎಂಪಿ ಸದಸ್ಯೆಯ ಪತಿ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆ ವೇಳೆ ಹೈಡ್ರಾಮ ನಡೆಸಲಾಗಿದೆ. ಪೊಲೀಸರ ಕೈಗೆ ಸಿಗದಂತೆ ಓಡಲು ಆರೋಪಿಗಳು ಯತ್ನಿಸಿದ್ದು ಈ ವೇಳೆ ಪೊಲೀಸರು ಆರೋಪಿಗಳನ್ನು ಅಟ್ಟಾಡಿಸಿ ಬಂಧಿಸಿದ್ದಾರೆ. ಒಂದು ಕಡೆ ಆರೋಪಿಗಳ ಬಂಧನವಾಗುತ್ತಿದ್ದಂತೆ ವಾಟ್ಸಾಪ್ ಮೆಸೇಜ್ ಮೂಲಕ ಉಳಿದವರಿಗೆ ಎಚ್ಚರಿಕೆ ನೀಡಲಾಗಿದೆ.
ಹಲವು ಆರೋಪಿಗಳ ಮೊಬೈಲ್ನಲ್ಲಿ ಎಚ್ಚರಿಕೆಯ ಸಂದೇಶ ಪತ್ತೆಯಾಗಿದೆ. ಪೊಲೀಸರು ಬಂಧಿಸುತ್ತಿದ್ದಾರೆ ಮನೆ ಬಾಗಿಲು ತೆರೆಯಬೇಡಿ, ಒಂದು ವೇಳೆ ಬಾಗಿಲು ತೆರೆದರೆ ಹೆಂಗಸರು, ಮಕ್ಕಳನ್ನು ಮುಂದೆ ಬಿಡಿ. ನೀವು ಅವರಿಗೆ ಸಿಗದಂತೆ ಒಳಗೆ ಅವಿತುಕೊಳ್ಳಿ ಎಂದು ಮೆಸೇಜ್ ವಾಟ್ಸಾಪ್ ಗ್ರೂಪ್ ನಲ್ಲಿ ಆರೋಪಿಗಳು ಮೆಸೇಜ್ ರವಾನಿಸಿದ್ದಾರೆ.
ಬಿಬಿಎಂಪಿ ಕಾರ್ಪೊರೇಟರ್ ಪತಿ ಕಲೀಂ ಪಾಷಾನನ್ನು ಕೂಡ ಬಂಧಿಸಲಾಗಿದೆ. ಈತ ಗಲಾಟೆ ನಡೆಯುವ ಮೊದಲೇ ಠಾಣೆಯ ಬಳಿ ಬಂದು ಉದ್ರೇಕಗೊಳ್ಳುವಂತೆ ಮಾತನಾಡಿ ಗಲಾಟೆ ಆರಂಭವಾದ ನಂತರ ಸ್ಥಳದಿಂದ ಪರಾರಿಯಾಗಿದ್ದ. ಮತ್ತೆ ಠಾಣೆಗೆ ಬಂದು ಪೊಲೀಸರಿಗೆ ಸಹಕರಿಸುವಂತೆ ನಟಿಸಿದ್ದ ಎನ್ನಲಾಗಿದ್ದು, ಆತನನ್ನು ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 200 ಆರೋಪಿತರನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ಬಂಧಿತ 89 ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಇವರೆಲ್ಲರನ್ನು ಬಳ್ಳಾರಿ ಸೆಂಟ್ರಲ್ ಜೈಲ್ ಗೆ ಶಿಫ್ಟ್ ಮಾಡಲಾಗಿದೆ. ಬಿಗಿಭದ್ರತೆಯಲ್ಲಿ ಆರೋಪಿಗಳನ್ನು ಬಳ್ಳಾರಿಗೆ ಕರೆತರಲಾಗಿದ್ದು ಕಾರಾಗೃಹದ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ.