alex Certify ಅರಸಾಳು ರೈಲ್ವೇ ನಿಲ್ದಾಣ `ಮಾಲ್ಗುಡಿ ಡೇಸ್’ ಮ್ಯೂಸಿಯಂ ಉದ್ಘಾಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರಸಾಳು ರೈಲ್ವೇ ನಿಲ್ದಾಣ `ಮಾಲ್ಗುಡಿ ಡೇಸ್’ ಮ್ಯೂಸಿಯಂ ಉದ್ಘಾಟನೆ

ಶಿವಮೊಗ್ಗ: ಆರ್.ಕೆ. ನಾರಾಯಣ್ ಅವರ ಖ್ಯಾತ `ಮಾಲ್ಗುಡಿ ಡೇಸ್’ ಕೃತಿಯನ್ನು ಟೆಲಿವಿಷನ್ ಸೀರಿಯಲ್ ಆಗಿ ನಿರ್ಮಿಸಿದ ದಿವಂಗತ ಶಂಕರನಾಗ್ ಅವರು ಇದೇ ಅರಸಾಳು ರೈಲ್ವೇ ನಿಲ್ದಾಣವನ್ನು ಪ್ರಮುಖವಾಗಿ ಬಳಸಿಕೊಂಡಿದ್ದಾರೆ.

ಇದರ ನೆನಪಿಗಾಗಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಹಳೆಯ ಸ್ಟೇಷನನ್ನು ಮಾಲ್ಗುಡಿ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ಇಲ್ಲಿನ ಫ್ಲಾಟ್‍ಫಾರ್ಮ್ ವಿಸ್ತರಿಸಲಾಗಿದ್ದು, ಪ್ರಸ್ತುತ 12 ಕೋಚ್ ರೈಲುಗಳಿಗೆ ನಿಲುಗಡೆಗೆ ಅವಕಾಶವಿತ್ತು. ಇದೀಗ 28 ಕೋಚ್ ರೈಲುಗಳು ನಿಲ್ಲುವ ಸೌಲಭ್ಯ ಕಲ್ಪಿಸಲಾಗಿದೆ. ಇದೊಂದು ಪ್ರವಾಸಿ ತಾಣವಾಗಿ ಮುಂದಿನ ದಿನಗಳಲ್ಲಿ ಅಭಿವೃದ್ಧಿಯಾಗಲಿದೆ.

ಶಿವಮೊಗ್ಗ ಮುಖ್ಯ ರೈಲು ನಿಲ್ದಾಣದಲ್ಲಿ ಲಿಫ್ಟ್ ಹಾಗೂ ಅರಸಾಳು ನಿಲ್ದಾಣದಲ್ಲಿ ಮೂಲಸೌಕರ್ಯಗಳು, ಸ್ಟೇಷನ್ ಬಿಲ್ಡಿಂಗ್ (ಮ್ಯೂಸಿಯಂ ಬಿಲ್ಡಿಂಗ್) ಹಾಗೂ ವಿಸ್ತರಣೆಗೊಂಡ ರೈಲ್ವೆ ಫ್ಲಾಟ್ ಫಾರ್ಮ್ ಕಾಮಗಾರಿಗಳನ್ನು ವರ್ಚುವಲ್ ವೇದಿಕೆಯ ಮೂಲಕ ತಮ್ಮ ಬೆಳಗಾವಿ ಕಚೇರಿಯಿಂದ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಉದ್ಘಾಟಿಸಿದ್ದಾರೆ.

ಶಿವಮೊಗ್ಗ-ಶಿಕಾರಿಪುರ-ರಾಣೇಬೆನ್ನೂರು ರೈಲ್ವೇ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಮುಗಿದ ತಕ್ಷಣ ಯೋಜನೆ ಕಾಮಗಾರಿ ಅನುಷ್ಟಾನಗೊಳಿಸಲಾಗುವುದು. 994 ಕೋಟಿ ರೂಪಾಯಿ ವೆಚ್ಚದಲ್ಲಿ ಶಿವಮೊಗ್ಗ-ರಾಣೆಬೆನ್ನೂರು ಹೊಸ ರೈಲು ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿಗಳು ಉಚಿತವಾಗಿ ಭೂಮಿ ಒದಗಿಸುವುದರ ಜತೆಗೆ ರಾಜ್ಯ ಸರ್ಕಾರದ ವತಿಯಿಂದ ಶೇ.50 ರಷ್ಟು ಯೋಜನಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ. ಅದೇ ರೀತಿ ದಾವಣಗೆರೆ-ಬೆಂಗಳೂರು ನಡುವೆ ಡಬಲ್ ಲೈನ್ ನಿರ್ಮಾಣಕ್ಕೂ ಜಮೀನು ಒದಗಿಸುವುದಾಗಿ ತಿಳಿಸಿದ್ದಾರೆ. ರೈಲ್ವೆ ಇಲಾಖೆಗೆ ಭೂಮಿ ಹಸ್ತಾಂತರಿಸಿದ ತಕ್ಷಣವೇ ಕಾಮಗಾರಿ ಆರಂಭಿಸಲು ಅಗತ್ಯ ಕ್ರಮವನ್ನು ಇಲಾಖೆಯ ವತಿಯಿಂದ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಶಿವಮೊಗ್ಗ ಪೆಸಿಟ್ ಕಾಲೇಜು ಸಭಾಂಗಣದಲ್ಲಿ ಸಜ್ಜುಗೊಳಿಸಲಾಗಿದ್ದ ವರ್ಚುವಲ್ ವಿಡಿಯೋ ಮೂಲಕ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಎರಡು ಲಿಫ್ಟ್ ಗಳನ್ನು ನಿರ್ಮಿಸಲಾಗಿದ್ದು ಹಿರಿಯ ನಾಗರಿಕರಿಗೆ ಹಾಗೂ ಅಶಕ್ತ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆಗೆ 245ಕೋಟಿ ವೆಚ್ಚವಾಗಲಿದ್ದು, ಇನ್ನೆರಡು ತಿಂಗಳಲ್ಲಿ ಭೂಸ್ವಾಧೀನ ಪೂರ್ಣಗೊಳ್ಳಲಿದೆ. ಇದೇ ರೀತಿ ಶಿವಮೊಗ್ಗ-ಹರಿಹರ ರೈಲು ಮಾರ್ಗ, ಬಿರೂರು-ಶಿವಮೊಗ್ಗ ಡಬ್ಲಿಂಗ್ ಕಾರ್ಯ, ತಾಳಗುಪ್ಪ- ಸಿದ್ದಾಪುರ ಹಾಗೂ ಶಿವಮೊಗ್ಗದಿಂದ ಶೃಂಗೇರಿ ಮಾರ್ಗವಾಗಿ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಾಗಿದೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶಿವಮೊಗ್ಗದ ನೂರು ಅಡಿ ವರ್ತುಲ ರಸ್ತೆ 2ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.

ನಾಲ್ಕು ರೈಲ್ವೇ ಮೇಲು ಸೇತುವೆ ನಿರ್ಮಾಣ: ಶಿವಮೊಗ್ಗ ನಗರದ ವಿದ್ಯಾನಗರದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ, ಭದ್ರಾವತಿಯ ಜೆಡಿ ಕಟ್ಟೆಯಲ್ಲಿ, ಕಾಶಿಪುರ ಮತ್ತು ಸವಳಂಗ ರಸ್ತೆಯಲ್ಲಿ ರೈಲ್ವೇ ಮೇಲು ಸೇತುವೆ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ದೊರೆತಿದ್ದು, ಕಾಮಗಾರಿ ಆದಷ್ಟು ಬೇಗನೆ ಆರಂಭವಾಗಲಿದೆ ಎಂದು ಅವರು ಹೇಳಿದರು.

ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ವರ್ಚುವಲ್ ವೇದಿಕೆಯ ಮೂಲಕ ಸಮಾರಂಭದಲ್ಲಿ ಭಾಗವಹಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...