
ಬೆಂಗಳೂರು: ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯನ್ನು ಸ್ಥಾಪನೆ ಮಾಡಲಾಗಿದ್ದು, ಅದರ ಪೂರ್ಣ ಪ್ರಮಾಣದ ಆಡಳಿತ ಮಂಡಳಿಯ ಸಭೆ ಇಂದು ವಿಕಾಸಸೌಧದಲ್ಲಿ ನಡೆದಿದೆ.
ಸಭೆಯಲ್ಲಿ ಮಾತನಾಡಿದ ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್, ಅನಧಿಕೃತವಾಗಿ ಪ್ರಾಣಿಗಳ ಸಾಗಣೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನಕ್ರಮ ಕೈಗೊಳ್ಳಲಾಗುವುದು ಹಾಗೂ ಪ್ರಾಣಿ ಹಿಂಸೆಗೆ ಸಂಬಂಧಪಟ್ಟ ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸಲು ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ದಿನಾಂಕ: 25 -11 -2019 ರಂದು ಮಂಡಳಿ ನೋಂದಣಿಯಾಗಿದ್ದು, ಸದ್ಯ ನಮ್ಮ ರಾಜ್ಯದಲ್ಲಿ 85.22 ಲಕ್ಷ ದನ, 29.98 ಲಕ್ಷ ಎಮ್ಮೆ, 110.91 ಲಕ್ಷ ಕುರಿ, 61.96 ಲಕ್ಷ ಮೇಕೆ, 3.26 ಲಕ್ಷ ಹಂದಿ ಮತ್ತು 617 ಲಕ್ಷ ಕೋಳಿಗಳಿವೆ. ಈ ಎಲ್ಲಾ ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ 4214 ಪಶುವೈದ್ಯಕೀಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ಪ್ರಾಣಿ ಹಿಂಸಾ ಪ್ರತಿಬಂಧಕ ಅಧಿನಿಯಮ 1960 ಹಾಗೂ ನಿಯಮಗಳ ಪ್ರಕಾರ ಈ ಮಂಡಳಿಯ ಪ್ರಮುಖ ಕಾರ್ಯಗಳೆಂದರೆ: ಪ್ರಾಣಿಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಂದರ್ಭಾನುಸಾರ ಎದುರಾಗುವ ಸಮಸ್ಯೆಗಳ ಬಗ್ಗೆ ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಕಾಲಕಾಲಕ್ಕೆ ಸಲಹೆ ನೀಡುವುದು.
ಪಶು ಹಾಗೂ ಪಕ್ಷಿಗಳ ಸಂರಕ್ಷಣೆಗಾಗಿ ರಾಜ್ಯದಲ್ಲಿ ಸ್ಥಾಪಿಸಲಾದ ಪ್ರಾಣಿಕಲ್ಯಾಣ ಸಂಘಗಳು/ ನಿಕಾಯಗಳು/ ಸಂಸ್ಥೆಗಳಿಗೆ ಮಾನ್ಯತೆ ಹಾಗೂ ಸಲಗ್ನತೆ ನೀಡುವುದು.
ಪ್ರಾಣಿಗಳಿಗಾಗಿ ಶೆಡ್ಡುಗಳು, ನೀರಿನ ತೊಟ್ಟಿಗಳ ನಿರ್ಮಾಣವನ್ನು ಪ್ರೋತ್ಸಾಹಿಸುವುದು.
ಪ್ರಾಣಿಗಳನ್ನು ಕರುಣೆಯಿಂದ ನೋಡಿಕೊಳ್ಳಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು.
ಪ್ರಾಣಿಗಳಿಗೆ ಸಾಗಾಣಿಕೆ, ಪ್ರಾಣಿಗಳಿಗೆ ಉಂಟಾಗುವ ಅನವಶ್ಯಕ ನೋವು ಅಥವಾ ಯಾತನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು.
ಮಂಡಳಿಯ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನದ ಅಡಿಯಲ್ಲಿ ಈ ಎಲ್ಲ ಕಾರ್ಯಗಳು ನಡೆಯಲಿವೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲಾ ಪ್ರಾಣಿ ದಯಾ ಸಂಘಗಳ ಅಧ್ಯಕ್ಷರಾಗಿದ್ದು, ಪಶುಸಂಗೋಪನೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಮಂಡಳಿಗೆ ವಿವಿಧ ಕ್ಷೇತ್ರಗಳ ಅನುಭವಿಗಳನ್ನು ಸದಸ್ಯರನ್ನಾಗಿ ನೇಮಿಸಿದ್ದು, ಸದಸ್ಯರು ತಮ್ಮ ಜವಾಬ್ದಾರಿಯನ್ನು ಅರಿತು, ಪ್ರಾಣಿಗಳ ಯೋಗ ಕ್ಷೇಮಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು, ಪ್ರಾಣಿಗಳಿಗೆ ಯಾರಿಂದಲೂ, ಯಾವುದೇ ರೀತಿಯ ನೋವು, ಯಾತನೆ ಸಂಭವಿಸುವುದನ್ನು ತಡೆಯಬೇಕು ಎಂದು ಸಚಿವರು ಸಲಹೆ ನೀಡಿದ್ದಾರೆ.
ಸಭೆಯಲ್ಲಿ ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್, ಆಯುಕ್ತರಾದ ನಟೇಶ್, ನಿರ್ದೇಶಕರಾದ ಎಂ.ಟಿ. ಮಂಜುನಾಥ ಹಾಗೂ ಕರ್ನಾಟಕ ಪ್ರಾಣಿಕಲ್ಯಾಣ ಮಂಡಳಿಯ ಎಲ್ಲ ಸದಸ್ಯರು ಹಾಜರಿದ್ದರು.