
ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಆನೆಗುಡ್ಡೆಯಲ್ಲಿ ಮಹಾಗಣಪತಿ ದೇವಾಲಯವಿದೆ. ಕುಂಭಾಶಿ ಎಂದೂ ಕರೆಯಲ್ಪಡುವ ಆನೆಗುಡ್ಡೆ ಪರಶುರಾಮ ಕ್ಷೇತ್ರಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಕರಾವಳಿ ಕರ್ನಾಟಕದಲ್ಲಿ 7 ಮುಕ್ತಿ ಸ್ಥಳಗಳಲ್ಲಿ ಆನೆಗುಡ್ಡೆ ಕೂಡ ಒಂದಾಗಿದೆ ಎನ್ನಲಾಗಿದೆ.
ಕುಂಭಾಸುರ ಎಂಬ ರಾಕ್ಷಸನನ್ನು ಆನೆಗುಡ್ಡೆಯಲ್ಲಿ ವಧಿಸಲಾಗುತ್ತದೆ. ಈ ಕಾರಣದಿಂದ ಕುಂಭಾಶಿ ಎಂದೂ ಕರೆಯಲಾಗುತ್ತದೆ. ಮಹಾಗಣಪತಿಯನ್ನು ವಿನಾಯಕ, ಸರ್ವಸಿದ್ಧಿ ವಿನಾಯಕ ಎಂದು ಕರೆಯುತ್ತಾರೆ.
ಐತಿಹ್ಯದ ಪ್ರಕಾರ, ಆನೆಗುಡ್ಡೆ ಪ್ರದೇಶ ಬರಗಾಲಕ್ಕೆ ತುತ್ತಾಗಿದ್ದಾಗ, ಅಗಸ್ತ್ಯ ಮುನಿ ವರುಣನನ್ನು ಒಲಿಸಿಕೊಳ್ಳಲು ಇಲ್ಲಿ ಯಜ್ಞ ಮಾಡುತ್ತಾರೆ. ಅವರ ಯಜ್ಞಕ್ಕೆ ಕುಂಭಾಸುರ ಅಡ್ಡಿ ಮಾಡಿದಾಗ ಯಜ್ಞದಲ್ಲಿ ನಿರತರಾದ ಸಾಧುಗಳನ್ನು ಕಾಪಾಡಲು ಪಾಂಡವರಲ್ಲಿ ಬಲಶಾಲಿಯಾದ ಭೀಮನಿಗೆ ಆಶೀರ್ವದಿಸಿ ಕಳಿಸುತ್ತಾನೆ. ಭೀಮನು ಕುಂಭಾಸುರನನ್ನು ಕೊಲ್ಲುತ್ತಾನೆ.
ಆನೆಗುಡ್ಡೆ ಗಣಪತಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಾರೆ. ವಿನಾಯಕ ಸ್ವಾಮಿಯ ಭವ್ಯವಾದ ವಿಗ್ರಹ ಇಲ್ಲಿದೆ. ಬೆಳ್ಳಿಯ ಆಯುಧ, ನಿಂತ ಭಂಗಿಯಲ್ಲಿನ ವಿಗ್ರಹ ಭಕ್ತರನ್ನು ಸೆಳೆಯುತ್ತದೆ. ಇಲ್ಲಿಗೆ ಬರುವ ಭಕ್ತರು ವಿಶೇಷ ಪೂಜೆ, ಸೇವಾ ಕಾರ್ಯಗಳನ್ನು ನೆರವೇರಿಸುತ್ತಾರೆ. ರಾಷ್ಟ್ರೀಯ ಹೆದ್ದಾರಿ 17 ರಲ್ಲಿರುವ ಆನೆಗುಡ್ಡೆ ಮಂಗಳೂರಿನಿಂದ ಸುಮಾರು 90 ಕಿಲೋ ಮೀಟರ್, ಉಡುಪಿಯಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿದೆ. ನೀವೂ ಒಮ್ಮೆ ವಿನಾಯಕನ ದರ್ಶನ ಪಡೆದು ಬನ್ನಿ.