ಚಿಕ್ಕಮಗಳೂರು ಜಿಲ್ಲೆ ಪ್ರವಾಸಿಗರ ಸ್ವರ್ಗ. ಗಿರಿಧಾಮಗಳು, ದೇವಾಲಯಗಳು, ಜಲಪಾತಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿವೆ.
ತರೀಕೆರೆ ತಾಲ್ಲೂಕಿನ ಪ್ರವಾಸಿ ಸ್ಥಳಗಳಲ್ಲಿ ಅಮೃತಾಪುರ ಪ್ರಮುಖವಾಗಿದೆ. ಚಿಕ್ಕಮಗಳೂರಿನಿಂದ ಸುಮಾರು 67 ಕಿಲೋ ಮೀಟರ್ ದೂರದಲ್ಲಿದೆ. ಬೆಂಗಳೂರು –ಶಿವಮೊಗ್ಗ ರಸ್ತೆಯಲ್ಲಿ ತರೀಕೆರೆ ಸಮೀಪದಿಂದ ಒಳಗೆ ಹೋಗಬೇಕು.
ಬೇಲೂರು, ಹಳೆಬೀಡಿನ ಶಿಲ್ಪಕಲೆಯ ವೈಭವವನ್ನು ಕಣ್ತುಂಬಿಕೊಂಡಂತೆಯೇ ಅಮೃತಾಪುರದ ಅಮೃತೇಶ್ವರ ದೇವಾಲಯದ ಸೊಬಗನ್ನು ಸವಿಯಬಹುದು.
ಹೊಯ್ಸಳ ಅರಸ 2ನೇ ವೀರ ಬಲ್ಲಾಳನ ಕಾಲದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ದೇವಾಲಯದ ಗೋಪುರ ಆಕರ್ಷಕವಾಗಿದ್ದು, ಗೋಡೆಗಳ ಮೇಲೆ ಮಹಾಭಾರತ, ರಾಮಾಯಣದ ಸನ್ನಿವೇಶಗಳನ್ನು ಕೆತ್ತಲಾಗಿದೆ. ಇಲ್ಲಿರುವ ಕೆತ್ತನೆಗಳು ಆಕರ್ಷಕವಾಗಿವೆ.
ಸರಸ್ವತಿ, ಸಪ್ತ ಮಾತೃಕೆಯರ ವಿಗ್ರಹಗಳು ಗಮನಸೆಳೆಯುತ್ತವೆ. ಸಂಕ್ರಾಂತಿಯ ಸಂದರ್ಭದಲ್ಲಿ ಸೂರ್ಯನ ರಶ್ಮಿಗಳು ದೇವಾಲಯದ ಲಿಂಗವನ್ನು ಸ್ಪರ್ಶಿಸುತ್ತವೆ.
ತರೀಕೆರೆಯಲ್ಲಿ ಹೋಟೆಲ್, ವಸತಿ ಗೃಹಗಳಿವೆ. ಬೆಂಗಳೂರಿನಿಂದ ರೈಲು, ಬಸ್ ಸಂಪರ್ಕವಿದೆ. ಸುತ್ತಮುತ್ತ ಇನ್ನೂ ಅನೇಕ ಪ್ರವಾಸಿ ತಾಣಗಳಿದ್ದು, ಮೊದಲೇ ಮಾಹಿತಿ ಪಡೆದುಕೊಂಡು ಹೋದರೆ, ಅನುಕೂಲವಾಗುತ್ತದೆ.