
ಬೆಂಗಳೂರು: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ರೈತರಲ್ಲದವರೂ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಿದೆ. ಭೂಮಿ ಖರೀದಿಗೆ ಯಾವುದೇ ಆದಾಯ ಮಿತಿ ಇರುವುದಿಲ್ಲ.
ನಿರ್ಬಂಧಗಳನ್ನು ಸಡಿಲಿಸಿದ್ದು, ರಾಜ್ಯದಲ್ಲಿ ಯಾರು ಬೇಕಾದರೂ ಕೃಷಿಭೂಮಿ ಖರೀದಿಸಬಹುದಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಂಡಿದ್ದು, ಅಧಿವೇಶನದಲ್ಲಿ ವಿಧೇಯಕ ಮಂಡಿಸಿ ಜಾರಿಗೆ ತರಲಾಗುವುದು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭೂಮಿ ಖರೀದಿಸಲು ನಿರ್ಬಂಧ ಸಡಿಲಿಸುವ ಜೊತೆಗೆ ಕಾಯ್ದೆ ಸರಳ ಮಾಡಲು ತೀರ್ಮಾನಿಸಲಾಗಿದೆ.
ಉದ್ಯಮಿಗಳು ಹೂಡಿಕೆದಾರರು ಸುಲಭವಾಗಿ ಕೃಷಿಭೂಮಿ ಮಾಲೀಕರಾಗಬಹುದು. ಆದಾಯ ಮಿತಿ ಇಲ್ಲದೆ ಇರುವ ಕಾರಣ ಶ್ರೀಮಂತರು ಕೃಷಿಭೂಮಿ ಖರೀದಿಸಬಹುದಾಗಿದೆ. ಕೃಷಿಭೂಮಿ ಬೆಲೆ ಏರಿಕೆಯಿಂದ ರೈತರಿಗೆ ಅನುಕೂಲವಾಗುತ್ತದೆ. ಗುತ್ತಿಗೆ ಕೃಷಿ ಮತ್ತು ಕಂಪನಿ ಕೃಷಿಗೆ ಅನುಕೂಲವಾಗಲಿದೆ. ಅಲ್ಲದೆ ಪಾಳು ಬಿದ್ದ ಭೂಮಿ ಬಳಕೆಯಾಗುತ್ತದೆ ಎನ್ನಲಾಗಿದೆ.
ಇದರಿಂದ ಕೃಷಿ ಭೂಮಿ ಪರಭಾರೆ ಆಗುವ ಅಪಾಯ ಕೂಡ ಇದೆ. ಸಣ್ಣ ಹಿಡುವಳಿದಾರರು, ಬಡವರು ಜಮೀನು ಕಳೆದುಕೊಳ್ಳುವ ಸಾಧ್ಯತೆಯಿದೆ. ಕೃಷಿ ಚಟುವಟಿಕೆಗಳ ಹೊರತಾಗಿ ಕೃಷಿಭೂಮಿ ಬಳಸುವ ಅಪಾಯವಿದೆ.