ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದ ಅನಾಥ ಶವದ ಕೊಲೆ ರಹಸ್ಯವನ್ನು ಬಯಲಿಗೆಳೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಕುಸ್ಕೂರು ಗ್ರಾಮದ ಕೆರೆಯಲ್ಲಿ ಸೆಪ್ಟೆಂಬರ್ 24 ರಂದು ಪುರುಷನ ಶವ ಪತ್ತೆಯಾಗಿತ್ತು. ಮೃತ ವ್ಯಕ್ತಿ ಸೊರಬ ತಾಲೂಕಿನ ಬಿ. ಹುಣವಳ್ಳಿ ಗ್ರಾಮದ ರವೀಂದ್ರ(36) ಎಂದು ಗುರುತಿಸಲಾಗಿದೆ. ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂಜುಳಾ ಮತ್ತು ತುಕ್ಕರಾಜು ಅಲಿಯಾಸ್ ರಾಜು ಎಂಬುವರನ್ನು ಬಂಧಿಸಿದ್ದಾರೆ.
ಶಿಕಾರಿಪುರದ ಬಿದರಕೊಪ್ಪ ವಾಸಿ ಮಂಜುಳಾ ಹಾಗೂ ರವೀಂದ್ರ ನಡುವೆ ಅಕ್ರಮ ಸಂಬಂಧವಿತ್ತು. ಇಬ್ಬರ ನಡುವೆ ವೈಮನಸ್ಸು ಉಂಟಾಗಿ ದೂರವಾಗಿದ್ದಾರೆ. ಈ ನಡುವೆ ತುಕ್ಕರಾಜು ಜೊತೆಗೆ ಗೆಳೆತನ ಬೆಳೆಸಿದ್ದ ಮಂಜುಳಾ ಹೊಸ ಪ್ರಿಯಕರ ಸಿಗುತ್ತಿದ್ದಂತೆ ರವೀಂದ್ರನ ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ. ಹೊಸ ಪ್ರಿಯಕರನೊಂದಿಗೆ ಸೇರಿ ಹಳೆ ಪ್ರಿಯಕರನನ್ನು ಕೊಲೆ ಮಾಡಿ ಮೃತದೇಹವನ್ನು ಕೆರೆಗೆ ಎಸೆದಿದ್ದಾರೆ ಎಂದು ಹೇಳಲಾಗಿದೆ.
ಶಿಕಾರಿಪುರ ಉಪ ವಿಭಾಗದ ಎಎಸ್ಪಿ ಶ್ರೀನಿವಾಸಲು ಮಾರ್ಗದರ್ಶನದಲ್ಲಿ ಸಿಪಿಐ ಗುರುರಾಜ್ ಮೈಲಾರ್ ಮತ್ತು ಶಿರಾಳಕೊಪ್ಪ ಪಿಎಸ್ಐ ರಮೇಶ್ ಹಾಗೂ ಸಿಬ್ಬಂದಿ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಮಾಹಿತಿ ನೀಡಿದ್ದಾರೆ.