ಬೆಂಗಳೂರು: ಅಕ್ರಮ ಸಂಬಂಧ ಬೆಳೆಸಿದ ಮಹಿಳೆಗೆ ಪ್ರಿಯಕರನೇ ಬೆದರಿಕೆ ಹಾಕಿದ್ದು ನೊಂದ ಮಹಿಳೆ ಪೊಲೀಸರ ಮೊರೆ ಹೋಗಿದ್ದಾಳೆ.
ಪೀಣ್ಯ ನಿವಾಸಿಯಾಗಿರುವ 36 ವರ್ಷದ ಮಹಿಳೆ 15 ವರ್ಷದ ಹಿಂದೆ ಮದುವೆಯಾಗಿದ್ದು ಮದುವೆಗೂ ಮೊದಲು ಉದ್ಯಮಿಯನ್ನು ಪ್ರೀತಿಸಿದ್ದು ಆತನಿಂದ ದೂರವಾಗಿದ್ದಳು. ಇತ್ತೀಚೆಗೆ ಸಂಪರ್ಕಕ್ಕೆ ಬಂದ ಉದ್ಯಮಿ ಸಂಬಂಧ ಬೆಳೆಸುವಂತೆ ಬಲವಂತ ಮಾಡಿದ್ದಾನೆ. ಮಹಿಳೆ ಒಪ್ಪದಿದ್ದಾಗ ಹಿಂದೆ ಆತನೊಂದಿಗೆ ಸುತ್ತಾಡಿದ ಫೋಟೋಗಳನ್ನು ತೋರಿಸಿ ಪತಿ ಮತ್ತು ಮಕ್ಕಳಿಗೆ ಕಳುಹಿಸುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ.
ಒಂದು ಸಲ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರೆ ಮತ್ತೆ ತೊಂದರೆ ಕೊಡಲ್ಲ ಎಂದು ನಂಬಿಸಿದ್ದಾನೆ. ಆತನ ಮಾತು ನಂಬಿದ ಮಹಿಳೆ ಸಂಬಂಧ ಬೆಳೆಸಿದ್ದಾಳೆ. ಆದರೆ ತನ್ನ ಚಾಳಿಯನ್ನು ಮುಂದುವರಿಸಿದ ಉದ್ಯಮಿ ಆಕೆಯೊಂದಿಗೆ ಇದ್ದ ಖಾಸಗಿ ದೃಶ್ಯದ ವಿಡಿಯೋ ಮಾಡಿಕೊಂಡಿದ್ದಾನೆ. ವಿಡಿಯೋವನ್ನು ಗಂಡನಿಗೆ ತೋರಿಸುವುದಾಗಿ ಬೆದರಿಸಿ ಮಹಿಳೆಯೊಂದಿಗೆ ಸಂಬಂಧ ಮುಂದುವರೆಸಿದ್ದಾನೆ.
ಬೆದರಿಕೆಯಿಂದ ದಿಕ್ಕು ತೋಚದಂತಾದ ಮಹಿಳೆ ಒಪ್ಪಿಕೊಂಡಿದ್ದಾಳೆ. ಲಾಕ್ಡೌನ್ ಜಾರಿಯಾದ ನಂತರ ಪತಿ ಮನೆಯಲ್ಲೇ ಕೆಲಸ ಮಾಡುತ್ತಿರುವುದರಿಂದ ಮಹಿಳೆಗೆ ಉದ್ಯಮಿಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಈ ವೇಳೆ ಗೆಳತಿಯ ಬಳಿ ಸಂಕಷ್ಟ ಹೇಳಿಕೊಂಡಿದ್ದು ಆಕೆ ನೀಡಿದ ಸಲಹೆ ಮೇರೆಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇರುವ ಪರಿಹಾರ ಕೌಟುಂಬಿಕ ಸಲಹಾ ಕೇಂದ್ರಕ್ಕೆ ಭೇಟಿ ನೀಡಿ ವಿಷಯ ತಿಳಿಸಿದ್ದಾರೆ.
ಕುಟುಂಬದವರಿಗೆ ವಿಚಾರ ತಿಳಿಯಬಾರದೆಂದು ಮಹಿಳೆ ಮನವಿ ಮಾಡಿದ್ದು ಸಲಹಾ ಕೇಂದ್ರದ ಆಪ್ತ ಸಮಾಲೋಚಕರು ಉದ್ಯಮಿಯ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆನ್ನಲಾಗಿದೆ.