ಬೆಂಗಳೂರು: ರಾಜ್ಯದ ವಿವಿಧೆಡೆ ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಮೇಲೆ ಬೆಳಗಾವಿಯ ರುಕ್ಮಿಣಿ ನಗರದಲ್ಲಿರುವ ತೂಕ ಮತ್ತು ಮಾಪನ ಇಲಾಖೆಯ ಸಹಾಯಕ ಕಂಟ್ರೋಲರ್ ಸುಭಾಷ್ ಉಪ್ಪಾರ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಆರೋಪದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆ ಭೂದಾಖಲೆಗಳ ಸಹಾಯಕ ನಿರ್ದೇಶಕ ಗೋಪಾಲ ಮಾಲಗತ್ತಿ ಅವರ ಕಚೇರಿ ಮತ್ತು ಕೊಪ್ಪಳದ ಭಾಗ್ಯನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಗಿದೆ.
ಕಲಬುರ್ಗಿಯ ಪೂಜಾ ಕಾಲೋನಿಯಲ್ಲಿ ಯಾದಗಿರಿ ಜಿಲ್ಲೆ ದೇವರಾಜ ಅರಸು ನಿಗಮದ ವ್ಯವಸ್ಥಾಪಕ ಜಗದೇವಪ್ಪ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆಸಿದೆ ಎಂದು ಹೇಳಲಾಗಿದೆ.