
ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳು ಲಂಚದ ಹಣ ಹಂಚಿಕೊಳ್ಳುವಾಗಲೇ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು 22 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ.
ಮಂಡಳಿಯ ಪ್ರಧಾನ ವ್ಯವಸ್ಥಾಪಕ, ವ್ಯವಸ್ಥಾಪಕ ಮತ್ತು ಸಹಾಯಕ ಪ್ರಧಾನ ವ್ಯವಸ್ಧಾಪಕಿ ಹಾಗೂ ಮಹತ್ವದ ದಾಖಲೆಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಭೂಮಿ ಖರೀದಿಸಿ ಕೊಡುವ ಯೋಜನೆಯಲ್ಲಿ ಮಧ್ಯವರ್ತಿಗಳ ಮೂಲಕ ಅಕ್ರಮ ನಡೆಸಿ ಹಣ ಹಂಚಿಕೊಳ್ಳುತ್ತಿದ್ದ ವೇಳೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಸರ್ಕಾರದ ವತಿಯಿಂದ ಜಮೀನು ಖರೀದಿಸಿ ಪರಿಶಿಷ್ಟ ಪಂಗಡದ ಭೂರಹಿತ ಫಲಾನುಭವಿಗಳಿಗೆ ನೀಡುವ ಯೋಜನೆಯಡಿ ಅಕ್ರಮ ಎಸಗಲಾಗಿದೆ. ಫಲವತ್ತಾದ ಜಮೀನು ಬದಲಿಗೆ ಕಳಪೆ ಜಮೀನನ್ನು ಮಧ್ಯವರ್ತಿಗಳ ಮೂಲಕ ಖರೀದಿಸಿ ನಿಗದಿಗಿಂತ ಹೆಚ್ಚಿನ ಮೊತ್ತವನ್ನು ಕೊಡಲಾಗುತ್ತದೆ. ಈ ರೀತಿ ಅಕ್ರಮ ನಡೆಸಿ ಹಣ ಹಂಚಿಕೊಳ್ಳುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.