ಹಾಸನ: ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯದಲ್ಲಿ ಲಾಕ್ ಡೌನ್ ಮಾದರಿ ಕರ್ಫ್ಯೂ ಜಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ದೇವಸ್ಥಾನದ ಉತ್ಸವಕ್ಕೆ ಅವಕಾಶವಿಲ್ಲ ಎಂದು ಹೇಳಿದ ಅರ್ಚಕರನ್ನೇ ಗ್ರಾಮದ ಭಕ್ತರು ಹಿಡಿದು ಥಳಿಸಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸಿಪುರದ ಕಬ್ಬತ್ತಿ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ರಂಗನಾಥಸ್ವಾಮಿ ದೇವಸ್ಥಾನದ ಅರ್ಚಕ ಶ್ರೀಕಾಂತ್ ಅವರನ್ನು ಗ್ರಾಮದ ಭಕ್ತರು ಹಿಡಿದು ಥಳಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವರ ಉತ್ಸವ ಮಾಡಿ, ಪೂಜೆ ನೆರವೇರಿಸುವಂತೆ ಗ್ರಾಮದ ಹಲವು ಯುವಕರು ಅರ್ಚಕರ ಮುಂದೆ ಬೇಡಿಕೆ ಇಟ್ಟಿದ್ದರಂತೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಸಧ್ಯಕ್ಕೆ ಉತ್ಸವ ಸಾಧ್ಯವಿಲ್ಲ ಎಂದು ಅರ್ಚಕರು ಹೇಳಿದ್ದಾರೆ.
ಇದರಿಂದ ಕೋಪಗೊಂಡ ಯುವಕರು ಅರ್ಚಕರನ್ನೇ ಹಿಡಿದು ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಅರ್ಚಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅನ್ಯಾಯ ಖಂಡಿಸಿ ಕುಟುಂಬಸ್ಥರು ಗೊರೂರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.