ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್ 1 ಸಮೀಪಿಸುತ್ತಿದೆ. ಆದರೆ ಕೊರೊನಾ ಕಾರಣಕ್ಕೆ ಈ ಬಾರಿಯ ರಾಜ್ಯೋತ್ಸವ ಅದ್ದೂರಿಯಾಗಿ ನಡೆಯುವ ಸಾಧ್ಯತೆಗಳಿಲ್ಲ ಎನ್ನಲಾಗುತ್ತಿರುವುದರ ಮಧ್ಯೆ ಕನ್ನಡ ಪ್ರೇಮಿ ದಂಪತಿ ತಮ್ಮ ಪುತ್ರಿಗೆ ‘ಕನ್ನಡ’ ಎಂದು ಹೆಸರಿಡುವ ಮೂಲಕ ಭಾಷೆ ಮೇಲಿನ ಅಭಿಮಾನ ಮೆರೆದಿದ್ದಾರೆ.
ಹೌದು, ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ನೆಲೆಸಿರುವ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ನೆಂಪುವಿನ ಪ್ರತಾಪ್ ಶೆಟ್ಟಿ ಹಾಗೂ ಪ್ರತಿಮಾ ಕನ್ನಡ ಪ್ರೇಮ ಮೆರೆದಿರುವ ದಂಪತಿಯಾಗಿದ್ದಾರೆ.
ಒಳಾಂಗಣ ವಿನ್ಯಾಸ ಗುತ್ತಿಗೆದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರತಾಪ್ ಶೆಟ್ಟಿ 2019 ರ ನವೆಂಬರ್ 27ರಂದು ಜನಿಸಿದ ತಮ್ಮ ಚೊಚ್ಚಲ ಪುತ್ರಿಗೆ ‘ಕನ್ನಡ’ ಎಂದು ಹೆಸರಿಟ್ಟಿದ್ದು, ಇದರಿಂದ ಪ್ರತಾಪ್ ಶೆಟ್ಟಿ ಅವರ ಪತ್ನಿ ಪ್ರತಿಮಾ ಕೂಡ ಸಂತಸಗೊಂಡಿದ್ದಾರೆ. ದಂಪತಿಯ ಪುತ್ರಿಗೆ ಈಗ ವರ್ಷ ತುಂಬುತ್ತಿದ್ದು, ದಂಪತಿಯ ಕನ್ನಡ ಅಭಿಮಾನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.