ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಬಡ ಜನರ ಜೀವನ ನಿರ್ವಹಣೆಗಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿರುವ ವಿಶೇಷ ಆರ್ಥಿಕ ಪ್ಯಾಕೇಜ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು, ಇಂದು ಘೋಷಣೆಯಾದ ಆರ್ಥಿಕ ಪ್ಯಾಕೇಜ್ ರಾಜ್ಯ ಸರ್ಕಾರದ ಕೆಟ್ಟ ಆಡಳಿತಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಕಳೆದ ಬಾರಿ ಸರ್ಕಾರ ಸುಮಾರು 1200 ಕೋಟಿ ರೂಪಾಯಿ ಮೌಲ್ಯದ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿತ್ತು. ಅದರಲ್ಲಿ ಹೆಕ್ಟೇರ್ ಗೆ 25 ಸಾವಿರ ರೂಪಾಯಿ ನೀಡಿತ್ತು. ಈ ಬಾರಿ ಈ ಹಣವನ್ನೂ ತಗ್ಗಿಸಿ 10 ಸಾವಿರ ರೂಪಾಯಿ ಮಾಡಲಾಗಿದೆ. ಗೊಬ್ಬರ, ಕೂಲಿ, ಕೃಷಿ ಉಪಕರಣಗಳ ಬೆಲೆ ಹೆಚ್ಚಾಗಿರುವ ಈ ಕಾಲದಲ್ಲಿ ರೈತರಿಗೆ ನೀಡಿರುವ ಈ ಪರಿಹಾರ ಅರೆಕಾಸಿನ ಮಜ್ಜಿಗೆಯಾಗಿದೆ. ಹಣ್ಣು ಹಾಗೂ ತರಕಾರಿ ಮಾರಾಟಗಾರರಿಗೆ ನೀಡಿರುವ ಅನುದಾನವೂ ಕೂಡ ಸಾಲೋದಿಲ್ಲ. ನೀವು ಪ್ಯಾಕೇಜ್ ಘೋಷಣೆಗೂ ಮುನ್ನ ಇವನ್ನೆಲ್ಲ ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಹೇಳಿದ್ರು.
ಇದೀಗ ಹಳ್ಳಿ ಹಳ್ಳಿಗಳಲ್ಲಿ ಕೋವಿಡ್ ವ್ಯಾಪಿಸಿದೆ. ರೈತರು ತಮ್ಮ ಹಾಗೂ ತಮ್ಮ ಮನೆಯವರ ಜೀವ ಉಳಿಸಿಕೊಳ್ಳಲು ಲಕ್ಷ ಲಕ್ಷ ಹಣ ಹೊಂದಿಸಬೇಕಾದ ಅನಿವಾರ್ಯತೆ ಇದೆ. ಈ ಸಂದರ್ಭದಲ್ಲಿ ಸರ್ಕಾರ ಈ ರೀತಿ ಸಹಾಯ ಮಾಡದೇ ಹೋದಲ್ಲಿ ಆತ ಇನ್ನಷ್ಟು ಸಾಲದ ಸುಳಿಯಲ್ಲಿ ಸಿಲುಕಲಿದ್ದಾನೆ ಎಂದು ಕಳವಳ ವ್ಯಕ್ತಪಡಿಸಿದ್ರು.