ಬೈಲಹೊಂಗಲ: ರೈತರ ಆದಾಯ ದ್ವಿಗಣ ಮಾಡುತ್ತೇವೆ ಎಂದು ಹೇಳಿ ರೈತ ವಿರೋಧಿ ಕೃಷಿ ಕಾನೂನು ಜಾರಿಗೆ ಮಾಡಿ ಅನ್ನದಾತನಿಗೆ ಅನ್ಯಾಯ ಮಾಡಿದ್ದಾರೆ. ಇದನ್ನು ಖಂಡಿಸಿ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೆ ಪ್ರಧಾನಿ ಮೋದಿ ರೈತರತ್ತ ಮುಖ ಮಾಡುತ್ತಲೂ ಇಲ್ಲ. ಹಿಟ್ಲರ್ ಮಾಡುತಿದ್ದ ಕೆಲಸವನ್ನು ಈಗ ಮೋದಿ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ಬೈಲಹೊಂಗಲದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಹಿಟ್ಲರ್ ನೂರು ಸುಳ್ಳು ಹೇಳಿ ಅದನ್ನೇ ನಿಜ ಮಾಡುತ್ತಿದ್ದ. ಈಗ ಪ್ರಧಾನಿ ಮೋದಿಯೂ ಸಾವಿರ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಮಾತೆತ್ತಿದರೆ 56 ಇಂಚಿನ ಎದೆ ಇದೆ ಎಂದು ಹೇಳುತ್ತಾರೆ. 56 ಇಂಚಿನ ಎದೆ ಇದ್ದರೆ ಸಾಲದು ಅದರಲ್ಲಿ ಹೃದಯ ಇರಬೇಕು. ದೇಶದಲ್ಲಿ ಕೊರೊನಾದಿಂದಾಗಿ ಜನರು ಸಾಯುತ್ತಿದ್ದರೆ ಲಸಿಕೆ ಕಂಡು ಹಿಡಿಯುವುದನ್ನು ಬಿಟ್ಟು ಚಪ್ಪಾಳೆ ತಟ್ಟಿ, ತಟ್ಟೆ ಬಡಿಯಿರಿ ಎಂದು ಹೇಳಿದರಲ್ಲ ಇವರು ಪ್ರಧಾನಿಯಾಗಲು ಯೋಗ್ಯರೇ? ಎಂದು ಪ್ರಶ್ನಿಸಿದರು.
ಕೊರೊನಾ ರಾತ್ರಿ ಮಾತ್ರ ಹರಡತ್ತೆ ಅಂತಾ ಸರ್ಕಾರಕ್ಕೆ ಹೇಳಿದ್ಯಾರು….?: ಡಿ.ಕೆ.ಶಿವಕುಮಾರ್ ಪ್ರಶ್ನೆ
ಇನ್ನು ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿದೆ. ಸಾಲಮಾಡಿ ಸರ್ಕಾರದ ಹಣವನ್ನೇ ಲೂಟಿ ಮಾಡುತ್ತಿದ್ದಾರೆ. ಶಾಸಕರನ್ನು ಖರೀದಿಸಲು 500 ಕೋಟಿ, ಚುನಾವಣೆ ಮಾಡಲು 500 ಕೋಟಿ ಖರ್ಚು ಮಾಡಿದ್ದಾರೆ ಇಂತಹ ಭ್ರಷ್ಟ ಮನುಷ್ಯರನ್ನು ನೋಡಿಲ್ಲ ಎಂದು ಕಿಡಿಕಾರಿದರು.
ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ದೇಶ ಹಾಗೂ ರಾಜ್ಯದ ಜನರಿಗೆ ಸ್ವರ್ಗ ನೀಡುತ್ತೇವೆ ಎಂದು ಹೇಳಿ ಜನರು ನರಕ ಯಾತನೆ ಅನುಭವಿಸುವಂತೆ ಮಾಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಗತ್ಯವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಜನರು ಸಂಕಷ್ಟದಿಂದ ಕಣ್ಣೀರಿಡುತ್ತಿದ್ದಾರೆ. ಆದರೂ ಅವರು ಕ್ಯಾರೇ ಎನ್ನುತ್ತಿಲ್ಲ ಇಂತಹ ಸರ್ಕಾರಗಳು ಬೇಕಾ? ಕಳೆದ ನಾಲ್ಕು ದಿನಗಳಿಂದ ರಾಜ್ಯದಲ್ಲಿ ಸಾರಿಗೆ ಮುಷ್ಕರ ನಡೆಯುತ್ತಿದೆ. ಜನ ಏನ್ಮಾಡ್ಬೇಕು? ನಿನ್ನೆ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಷ್ಟ ಕೇಳಿ ಪರಿಹಾರ ಮಾಡೋದು ಬಿಟ್ಟು ಹೆದರಿಸ್ತಿದ್ದಾರೆ. ಎಸ್ಮಾ ಜಾರಿ ಮಾಡಿ ಜೈಲಿಗೆ ಹಾಕ್ತೀವಿ ಎನ್ನುತ್ತಿದ್ದಾರೆ. ಎಷ್ಟು ಜನರನ್ನು ಜೈಲಿಗೆ ಹಾಕುತ್ತೀರಾ ಎಂದು ಪ್ರಶ್ನಿಸಿದರು.