ಮೈಸೂರು: ಕೊರೊನಾ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ನಾಳೆ ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ. ಈ ಬಾರಿ ಅರಮನೆಗೆ ಮಾತ್ರ ಜಂಬೂ ಸವಾರಿ ಸೀಮಿತವಾಗಿದ್ದು, ನಾಳೆ ಮಧ್ಯಾಹ್ನ ಸಿಎಂ ಬಿ.ಎಸ್.ಯಡಿಯೂರಪ್ಪ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ.
ನಾಳೆ ಮಧ್ಯಾಹ್ನ 2:59ರಿಂದ 3:20ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತಿದ್ದು, ಬಳಿಕ 3:40 ರಿಂದ 4:15ರೊಳಗೆ ಶುಭ ಕುಂಭ ಲಗ್ನದಲ್ಲಿ ಅಭಿಮನ್ಯು ಆನೆ ಚಿನ್ನದ ಅಂಬಾರಿ ಹೊರಲಿದೆ. ಅಂಬಾರಿಯಲ್ಲಿ ವಿರಾಜಮಾನವಾಗುವ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಸಿಎಂ ಯಡಿಯೂರಪ್ಪ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಸಾಂಪ್ರದಾಯಿಕವಾಗಿ ಚಾಲನೆ ನೀಡಲಿದ್ದಾರೆ. ಪ್ರತಿ ವರ್ಷ 5.5 ಕಿ.ಮೀ ಸಾಗುತ್ತಿದ್ದ ಜಂಬೂ ಸವಾರಿ ಮೆರವಣಿಗೆ ಈ ಬಾರಿ ಕೇವಲ 400 ಮೀಟರ್ ನಷ್ಟು ಸಾಗಿ ಅಂತ್ಯಗೊಳ್ಳಲಿದೆ.
ಈ ಬಾರಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಕೇವಲ 4 ಕಲಾತಂಡಗಳು, ಅಶ್ವಾರೋಹಿ ದಳದ 2 ತುಕಡಿ, 2 ಸ್ತಬ್ಧ ಚಿತ್ರ, ರಾಜ್ಯ ಪೊಲೀಸ್ ವಾಹನದ ಆನೆಗಾಡಿ ಮಾತ್ರ ಸಾಗಲಿದೆ.