
ಬೆಂಗಳೂರು: ದರ್ಶನ್ ಅಭಿಮಾನಿಗಳ ಮುತ್ತಿಗೆ, 40 ವರ್ಷಗಳ ಚಿತ್ರರಂಗದ ಬದುಕಿಗೆ ಅಪಮಾನ ಮಾಡಿದ ಘಟನೆಗಳಿಂದ ತೀವ್ರವಾಗಿ ನೊಂದಿರುವ ನವರಸನಾಯಕ ಜಗ್ಗೇಶ್ ತಮ್ಮ ಮುಂದಿನ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇನ್ಮುಂದೆ ಎಲ್ಲಾ ಚಟುವಟಿಕೆಗಳಿಂದಲೂ ದೂರ ಉಳಿಯುವುದಾಗಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, ಆತ್ಮೀಯರೆ ನನಗೆ ನೀವು ನಿಮಗೆ ನಾನು. ಇನ್ನುಮುಂದೆ ನನ್ನ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮ, ಭೇಟಿ, ಹರಟೆ ನನ್ನಿಂದ ಇರುವುದಿಲ್ಲ. ಮುಂದೆ ನನ್ನ ಬದುಕು ಸಿನಿಮಾ, ನನ್ನ ಟಿವಿ ಶೋಗೆ ಮಾತ್ರ ಮೀಸಲು. ಕಾರಣ ತುಂಬ ಬೇಸರವಾಗಿದೆ. ನಮ್ಮ ರಂಗ, ದೊಡ್ಡವರು ಬದುಕಿದ್ದಾಗಲೇ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ಪುರುಷರ ಸಾಮ್ರಾಜ್ಯ ಆಗಿದೆ ಚಿತ್ರರಂಗ ಎಂದು ಹೇಳಿದ್ದಾರೆ.
ಜಗ್ಗೇಶ್ ಅವರ ನಿರ್ಧಾರದ ಬೆನ್ನಲ್ಲೇ ಜಗ್ಗೇಶ್ ಅಭಿಮಾನಿಗಳು ಫಿಲ್ಮ್ ಚೇಂಬರ್ ಬಳಿ ಜಮಾಯಿಸಿದ್ದು, ನವರಸ ನಾಯಕನಿಗೆ, 40 ವರ್ಷಗಳ ಕಲಾಸೇವೆ ಮಾಡಿದ ಹಿರಿಯ ನಟನಿಗೆ ಈ ರೀತಿ ಅವಮಾನ ಮಾಡಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.