ಬೆಂಗಳೂರು: ಇಂದಿನಿಂದ ದೇಶಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಿಕೆ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ರಾಜ್ಯದಲ್ಲಿ ಕೂಡ ಸಿಎಂ ಬಿ.ಎಸ್.ಯಡಿಯೂರಪ್ಪ, ಲಸಿಕೆ ಅಭಿಯಾನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.
ಬೆಂಗಳೂರಿನ ಶಿವಾಜಿನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಲಸಿಕಾ ಅಭಿಯಾನಕ್ಕೆ ಸಿಎಂ ಚಾಲನೆ ನಿಡಿದರು.
3 ತಿಂಗಳ ಸಂಬಳ ಆಶಾ ಕಾರ್ಯಕರ್ತೆಯರಿಗೆ ನೀಡಿದ ಶಾಸಕ
ಈ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ, ನಮ್ಮ ಬಳಿ 1 ಲಕ್ಷ ಲಸಿಕೆ ಸಂಗ್ರಹವಿದೆ. ಕೇಂದ್ರದಿಂದ 3 ಲಕ್ಷ ಲಸಿಕೆ ಬಂದಿದ್ದು, ಒಟ್ಟು 4 ಲಕ್ಷ ಡೋಸ್ ಲಸಿಕೆಯಿದೆ. ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಆರಂಭವಾಗಿರುವುದರಿಂದ ಸಾಂಕೇತಿಕವಾಗಿ ರಾಜ್ಯದಲ್ಲೂ ಚಾಲನೆ ನೀಡಲಾಗಿದೆ. ಒಂದೆರಡು ದಿನಗಳಲ್ಲಿ ಇನ್ನಷ್ಟು ಲಸಿಕೆಗಳು ಪೂರೈಕೆಯಾಗಲಿದ್ದು, ಅಭಿಯಾನ ದೊಡ್ಡ ಪ್ರಮಾಣದಲ್ಲಿ ನಿರಂತರ ಮುಂದುವರೆಯಲಿದೆ ಎಂದರು.
ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ದೈಹಿಕ ಅಂತರ ಪಾಲನೆ ಮಾಡಿ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ಎಂದು ಕರೆ ನೀಡಿದರು.